ದಕ್ಷಿಣ ಕನ್ನಡ: ಖಾಸಗಿ ಬಸ್‌ಗಳದ್ದೇ(Private Buses ) ಪಾರುಪತ್ಯವಿರುವ ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada District)ಅನೇಕ ಪ್ರದೇಶಗಳು ಸರಕಾರದ ಶಕ್ತಿ ಯೋಜನೆಯಿಂದ ವಂಚಿತವಾಗಿದ್ದವು.ಅದರಲ್ಲೂ ಆ ಒಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆ ಎಸ್ ಆರ್ ಟಿ ಸಿ ಸಂಚಾರವೇ(KSRTC) ಇರಲಿಲ್ಲ. ಖಾಸಗಿ ಬಸ್ ಗಳದ್ದೇ ದರ್ಬಾರು. ಆದರೆ ಇದೀಗ ಈ ಪಾರುಪತ್ಯಕ್ಕೆ ಇತಿಶ್ರೀ ಹಾಡಲಾಗಿದೆ. ಸರಕಾರಿ ಬಸ್ ಓಡಾಟಕ್ಕೆ ಸಾರಿಗೆ ಇಲಾಖೆ (Transport Department) ಅಸ್ತು ಎಂದಿದೆ. ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ಸರ್ಕಾರಿ ಬಸ್ ಸೇವೆ ಆರಂಭವಾಗಿದೆ.
ಶಕ್ತಿ ಯೋಜನೆ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ. ಈ ಯೋಜನೆಯಿಂದ ಕೆ ಎಸ್ ಆರ್ ಟಿಸಿ ಬಸ್ಸುಗಳು ಮಹಿಳೆಯರಿಂದ ತುಂಬಿ ತುಳುಕಿದ್ದವು. ಇಡೀ ರಾಜ್ಯದ ಮಹಿಳೆಯರು ಸಂಭ್ರಮಿಸುತ್ತಿದ್ದರೂ ದಕ್ಷಿಣ ಕನ್ನಡದ ಒಂದಿಷ್ಟು ಪ್ರದೇಶದ ಮಹಿಳೆಯರಲ್ಲಿ ಕೊರಗಿತ್ತು. ಯಾಕಂದ್ರೆ ಈ ಪ್ರದೇಶಗಳಲ್ಲಿ ಸರಕಾರಿ ಬಸ್ಸುಗಳ ಸಂಚಾರವೇ ಇರಲಿಲ್ಲ. ಸರಕಾರಿ ಬಸ್‌ಗಳಿಗಿಂತ ಖಾಸಗಿ ಬಸ್‌ಗಳದ್ದೇ ಪಾರುಪತ್ಯವಿತ್ತು . ಅದರಲ್ಲೂ ಮಂಗಳೂರಿನಿಂದ ಕಾರ್ಕಳಕ್ಕೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಸರಕಾರಿ ಬಸ್ಸುಗಳನ್ನೇ ಕಂಡಿರಲಿಲ್ಲ. ಇಲ್ಲಿ ಖಾಸಗಿ ಬಸ್ಸುಗಳದ್ದೇ ಪಾರುಪತ್ಯ. ಆದರೆ ಈಗ ಆ ಪಾರುಪತ್ಯಕ್ಕೆ ಬ್ರೇಕ್ ಬಿದ್ದಿದೆ .ಸರಕಾರಿ ಬಸ್ಸುಗಳನ್ನೇ ಕಾಣದ ಮಂಗಳೂರು ಟೂ ಕಾರ್ಕಳ ರೂಟ್ ಗೆ ಕೆ ಎಸ್ ಆರ್ ಟಿ ಸಿ ಭಾಗ್ಯವನ್ನ ರಾಜ್ಯ ಸಾರಿಗೆ ಇಲಾಖೆ ಕರುಣಿಸಿದೆ . ಶತಮಾನದ ಬೇಡಿಕೆಗೆ ಸರಕಾರ ಅಸ್ತು ಎಂದಿದೆ.
ಮಂಗಳೂರು ಟೂ ಕಾರ್ಕಳ
ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಸರಕಾರಿ ಬಸ್ ಗಳನ್ನ ಓಡಿಸಬೇಕು ಅನ್ನೋದು ಹಲವು ದಶಕಗಳ ಬೇಡಿಕೆ. ಆದರೆ ಈ ಬೇಡಿಕೆಗೆ ರಾಜ್ಯ ಸಾರಿಗೆ ಇಲಾಖೆ ಅಸ್ತು ಅಂದರೂ ಖಾಸಗಿ ಬಸ್ ಮಾಲಕರು ವಿರೋಧ ವ್ಯಕ್ತಪಡಿಸುತ್ತಿದ್ರು. ದಿನ ನಿತ್ಯ ಈ ರೂಟ್ ನಲ್ಲಿ ಸಾವಿರಾರು ಪ್ರಯಾಣಿಕರು ಕಾರ್ಕಳದಿಂದ ಮಂಗಳೂರಿಗೆ ಮೂಡುಬಿದಿರೆ ಮೂಲಕ ಪ್ರಯಾಣಿಸುತ್ತಾರೆ. ಶಕ್ತಿ ಯೋಜನೆ ಅನುಷ್ಠಾನವಾದ ಬಳಿಕವಂತೂ ಸರಕಾರಿ ಬಸ್ಸುಗಳ ಬೇಡಿಕೆ ಹೆಚ್ಚಿತ್ತು .ಬಸ್ಸು ಮಂಜೂರಾದರೂ ಖಾಸಗಿ ಲಾಭಿಯಿಂದ ಸಂಕಷ್ಟ ಎದುರಾಗಿತ್ತು. ಮಂಗಳೂರು-ಮೂಡುಬಿದಿರೆ-ಕಾರ್ಕಳ ಮಧ್ಯೆ 8 ಬಸ್‌ಗಳ ಏಳು ಸಿಂಗಲ್ ಟ್ರಿಪ್‌ಗಾಗಿ ಕೆಎಸ್‌ಆರ್‌ಟಿಸಿಯಿಂದ 2014ರಲ್ಲಿಅರ್ಜಿ ಸಲ್ಲಿಸಲಾಗಿತ್ತು. ಸದ್ಯ ಈ ವಿಷಯದ ಬಗ್ಗೆ ನವೆಂಬರ್ 5ರಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧ್ಯಕ್ಷತೆಯಲ್ಲಿ ಆರ್‌ಟಿಎ ಸಭೆ ನಡೆದು, ಪರ-ವಿರೋಧ ವಾದ ಮಂಡನೆಯಾಗಿತ್ತು. ಉಭಯ ಕಡೆಯ ವಾದ ಆಲಿಸಿದ ಡಿಸಿ, ಆದೇಶ ಕಾಯ್ದಿರಿಸಿದ್ದಾರೆ.















