ಮಂಗಳೂರು: ಕೆನರಾ ಇಂಜಿನಿಯರಿಂಗ್ ಕಾಲೇಜಿನ ನೂತನ ಬ್ಯಾಚ್ ಪ್ರಾರಂಭೋತ್ಸವ. ಉದ್ಯೋಗಿಗಳಲ್ಲ, ಉದ್ಯಮಿಗಳಾಗುವ ಕನಸಿರಲಿ: ರಂಗನಾಥ ಭಟ್

Coastal Bulletin
ಮಂಗಳೂರು: ಕೆನರಾ ಇಂಜಿನಿಯರಿಂಗ್ ಕಾಲೇಜಿನ ನೂತನ ಬ್ಯಾಚ್ ಪ್ರಾರಂಭೋತ್ಸವ. ಉದ್ಯೋಗಿಗಳಲ್ಲ, ಉದ್ಯಮಿಗಳಾಗುವ ಕನಸಿರಲಿ: ರಂಗನಾಥ ಭಟ್

ಮಂಗಳೂರು: ವಿಜ್ಞಾನ ಎನ್ನುವುದು ಜ್ಞಾನವಾದರೆ ಎಂಜಿನಿಯರಿಂಗ್ ಎನ್ನುವುದು ತಂತ್ರಜ್ಞಾನ. ಈ ಪ್ರಾಯೋಗಿಕ ಜ್ಞಾನದಿಂದಲೇ ನಿತ್ಯ ಎಂಬಂತೆ ಜಗತ್ತಿನ ಆವಿಷ್ಕಾರ, ಬೆಳವಣಿಗೆಗಳು ನಡೆಯುತ್ತಲೇ ಇವೆ. ಭಾರತ ಜಾಗತಿಕವಾಗಿ ಅಭಿವೃದ್ಧಿಯ ಪಥದಲ್ಲಿ ಮುಂಚೂಣಿಗೆ ಬರುವಲ್ಲಿ ಯುವ ಎಂಜಿನಿಯರ್ ಗಳು ಹೊಸತನದ ಸವಾಲುಗಳನ್ನೆದುರಿಸುವ ಜಾಣ್ಮೆ, ಪ್ರತಿಭೆಯ ಅಗತ್ಯವಿದೆ. ತಾಂತ್ರಿಕ ಶಿಕ್ಷಣದ ಪದವಿಯೊಂದಿಗೆ ಉದ್ಯೋಗಿಗಳಾಗುವುದಕ್ಕಿಂತ ತಾವೇ ಉದ್ಯಮಿಗಳಾಗುವ ಉಜ್ವಲ ಭವಿಷ್ಯಕ್ಕೆ ತಾಂತ್ರಿಕ ಶಿಕ್ಷಣಕ್ಕೆ ಪ್ರವೇಶಿಸುವ ವಿದ್ಯಾರ್ಥಿಗಳು ವಿಶ್ವಾಸದೊಂದಿಗೆ ಸಜ್ಜಾಗಬೇಕಿದೆ ಎಂದು ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಗೌರವ ಕಾರ್ಯದರ್ಶಿ ಕೆನರಾ ಇಂಜಿನಿಯರಿಂಗ್ ಕಾಲೇಜಿನ ಸಂಚಾಲಕ ಎಂ. ರಂಗನಾಥ್ ಭಟ್ ಹೇಳಿದರು. ಅವರು ನಗರದ ಟಿ.ವಿ.ರಮಣ್ ಪೈ ಕನ್ವೆನ್ಷನ್ ಸೆಂಟರ್ ನಲ್ಲಿ ರವಿವಾರ ಜರಗಿದ ಕೆನರಾ ಇಂಜಿನಿಯರಿಂಗ್ ಕಾಲೇಜಿನ 2024 ಸಾಲಿನ ನೂತನ ಬ್ಯಾಚ್ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ವಿದ್ಯೆಯೇ ಕಾಮಧೇನುವಾಗಿದ್ದು ಸತ್ಯ ಮತ್ತು ನೈತಿಕತೆಯ ಮೌಲ್ಯಗಳ ಹಾದಿಯಲ್ಲಿ ವಿದ್ಯಾರ್ಥಿಗಳು ಮುನ್ನಡೆಯುವ ಅಗತ್ಯವಿದೆ ಎಂದವರು ಹೇಳಿದರು.

ಆಡಳಿತ ಮಂಡಳಿಯ ವಿಶೇಷ ಆಹ್ವಾನಿತ ಗಿರಿಧರ್ ಕಾಮತ್ ಮಾತನಾಡಿ ಶಿಕ್ಷಣದ ಜತೆಗೆ ಭಾಷಾ, ಸಂವಹನ ಕೌಶಲ, ಶಿಷ್ಟಾಚಾರಗಳ ತಿಳುವಳಿಕೆ ವ್ಯಕ್ತಿತ್ವಕ್ಕೆ ಮೆರುಗು ನೀಡುತ್ತವೆ ಎಂದರು.

ಆಡಳಿತ ಮಂಡಳಿ ಉಪಾಧ್ಯಕ್ಷ ಕೆ.ಸುರೇಶ್ ಕಾಮತ್ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಸವಾಲುಗಳು ಎಲ್ಲ ರಂಗಗಳಲ್ಲಿವೆ. ಶಿಸ್ತಿನೊಂದಿಗೆ ಗುರಿಯತ್ತ ಗಮನ ಹರಿಸಿ ಮೌಲ್ಯಗಳಿಗೆ ಜೀವನದಲ್ಲಿ ಮಹತ್ವ ನೀಡಬೇಕಾಗಿದೆ ಎಂದರು.

ಸಮಾರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಡೀನ್, ಡಾ. ಪ್ರಿಯಾ ವಿ.ಫ್ರ್ಯಾಂಕ್

, ನೇಮಕಾತಿ, ತರಬೇತಿ ವಿಭಾಗ, ಹಳೆ ವಿದ್ಯಾರ್ಥಿ ಸಂಪರ್ಕ ಮುಖ್ಯಸ್ಥೆ ದೀಪ್ತಿ ದಿನೇಶ್ ಪ್ರಭು ಹೊಸ ಬ್ಯಾಚಿನ ವಿದ್ಯಾರ್ಥಿಗಳಿಗೆ ಸಕಾಲಿಕ ಮಾರ್ಗದರ್ಶನ ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ನಾಗೇಶ್ ಹೆಚ್. ಆರ್. ಸ್ವಾಗತಿಸಿದರು. ಸಹ ಪ್ರಾಧ್ಯಾಪಕಿ ಕ್ಯಾರಲ್ ಡಿ.ಮೆಲ್ಲೋ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಆಡಳಿತ ಮಂಡಳಿ ಸದಸ್ಯರು, ಕಾಲೇಜಿನ ಉಪ ಪ್ರಾಂಶುಪಾಲ ಅಕಾಡೆಮಿಕ್ ಡೀನ್ ಡಾ. ಡೇಮಿಯನ್ ಎ. ಡಿಮೆಲ್ಲೋ, ಡೀನ್ಸ್, ವಿಭಾಗ ಮುಖ್ಯಸ್ಥರು, ಬೋಧಕ, ಬೋಧಕೇತರರು ಉಪಸ್ಥಿತರಿದ್ದರು.

Leave a Comment