ಬಂಟ್ವಾಳ: ಅಂಬೇಡ್ಕರ್ ಯುವ ವೇದಿಕೆ ಮತ್ತು ಕೈಕಂಬ ಸ್ಮಾರ್ಟ್ ಗೈಸ್ ಹಾಗೂ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ದಲಿತ ಮುಖಂಡ ದಿವಂಗತ ರಾಜಾ ಪಲ್ಲಮಜಲು ಇವರ 3ನೇ ವರ್ಷದ ಸ್ಮರಣಾರ್ಥ ಇದೇ 15ರಂದು ಸಂಜೆ 6 ಗಂಟೆಗೆ ಬಿ.ಸಿ.ರೋಡು ಸ್ಪರ್ಶ ಸಭಾಂಗಣದಲ್ಲಿ 'ನುಡಿ ನಮನ, ಪ್ರತಿಭಾ ಪುರಸ್ಕಾರ ಮತ್ತು ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ' ನಡೆಯಲಿದೆ ಎಂದು ಅಂಬೇಡ್ಕರ್ ಸಮಾಜ ಸೇವಾ ಸಂಘದ ಅಧ್ಯಕ್ಷ ಸತೀಶ್ ಅರಳ ಮತ್ತು ಬಂಟ್ವಾಳ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಬೇಬಿ ಕುಂದರ್ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡಿನಲ್ಲಿ ಗುರುವಾರ ಸಂಜೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಬಂಟ್ವಾಳದಲ್ಲಿ 200ಕ್ಕೂ ಮಿಕ್ಕಿ ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹ ನಡೆಸಿದ್ದ ರಾಜಾ ಪಲ್ಲಮಜಲು ಕಬಡ್ಡಿ ಆಟಗಾರರೂ ಆಗಿದ್ದರು. ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಮಾಜಿ ಸಚಿವ ಬಿ.ರಮಾನಾಥ ರೈ, ಮೈಸೂರು ರಾಮನಹಳ್ಳಿ ಬಸವಲಿಂಗಮೂರ್ತಿ ಸ್ವಾಮೀಜಿ ಉಪಸ್ಥಿತಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಶಾಸಕ
ರಾಜೇಶ ನಾಯ್ಕ್ ಉಳಿಪಾಡಿಗುತ್ತು ಮತ್ತಿತರ ಗಣ್ಯರು ಭಾಗವಹಿಸುವರು ಎಂದರು.
ಇದೇ ವೇಳೆ ಆತ್ಮಚರಿತ್ರೆ ಕಿರು ಪುಸ್ತಕ ಬಿಡುಗಡೆ, ಸಂಗೀತ ರಸಮಂಜರಿ ಮತ್ತಿತರ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ 20ಕ್ಕೂ ಮಿಕ್ಕಿ ಕಬಡ್ಡಿ ತಂಡಗಳು ಹೆಸರು ನೊಂದಾಯಿಸಿದೆ ಎಂದರು. ಅಂಬೇಡ್ಕರ್ ಯುವ ವೇದಿಕೆ ಅಧ್ಯಕ್ಷ ಪ್ರೀತಿರಾಜ್ ದ್ರಾವಿಡ್, ಪ್ರಮುಖರಾದ ಮಹಮ್ಮದ್ ನಂದಾವರ, ಪುನೀತ್ ರಾಜ್ ಇದ್ದರು.









