ಶ್ರೀ ಕ್ಷೇತ್ರ ಪೊಳಲಿಯ 1ತಿಂಗಳ ಜಾತ್ರಾ ಸಂದರ್ಭದ ಧ್ವಜಾರೋಹಣದ ವಿಶೇಷತೆ.

Coastal Bulletin
ಶ್ರೀ ಕ್ಷೇತ್ರ ಪೊಳಲಿಯ 1ತಿಂಗಳ ಜಾತ್ರಾ ಸಂದರ್ಭದ ಧ್ವಜಾರೋಹಣದ ವಿಶೇಷತೆ.

ಮೂಡಣದಲ್ಲಿ ಮಂಜಿನ ಬೆಟ್ಟ ಪಡುವಣದಲ್ಲಿ ಕಡಲಿನ ಘಟ್ಟ. ಈ ಪಡುವಣ ಕಡಲಿನ ತೆಂಗಿನ ಮಡಲಿನ ನಾಡು ವರುಣ ದೇವ ಪರಶುರಾಮ ದೇವರಿಗೆ ದಾನವಾಗಿ ಕೊಟ್ಟ ಭೂಮಿ ಅದುವೇ ನಮ್ಮೆಲ್ಲರ ಪುಣ್ಯ ಭೂಮಿ ತುಳುನಾಡು. ಬಡಗು ಬಾರಕೂರಿನಿಂದ ತೆಂಕು ಚಂದ್ರಗಿರಿ ನದಿ ಮೂಡಣ ಘಟ್ನದಿಂದ ಪಡುವಣ ಕಡಲಿನವರೆಗೆ ವಸರಿಸಿದ ನಾಡು ಈ ನಮ್ಮ ತುಳುನಾಡು.

ಇಡೀ ನಮ್ಮ ಕರ್ನಾಟಕವನ್ನು ಒಂದು ಮನೆಯಾಗಿ ಪರಿಗಣಿಸಿದರೆ ಅದರಲ್ಲಿ ದೇವರ ಕೋಣೆ ಈ ನಮ್ಮ ತುಳು ನಾಡು. ಈ ನಮ್ಮ ತುಳುನಾಡಿನ ಉದ್ದಗಲಕ್ಕೂ ಅಲ್ಲಲ್ಲಿ ತೀರ್ಥಕ್ಷೇತ್ರಗಳು, ಪುಣ್ಯಕ್ಷೇತ್ರಗಳು, ನಾಗ ದೇವರ ಸಾನಿಧ್ಯ, ದೈವಾಲಯಗಳು ಕಂಗೊಳಿಸಿ ತಮ್ಮ ಕಾರಣೀಕವನ್ನು ಬಿಂಬಿಸುತ್ತವೆ. ಅಂತಹ ಪುಣ್ಯ ಕ್ಷೇತ್ರಗಳಲ್ಲಿ ಅತೀ ಪುರಾತನವೂ ಅತ್ಯಂತ ಕಾರಣಿಕ ಕ್ಷೇತ್ರವಾಗಿದ್ದು, ಸಮಸ್ತ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾ ಭಾವುಕ ಭಕ್ತರನ್ನು ತನ್ನೆಡೆಗೆ ಆಕರ್ಷಿಸುವ ಪುಣ್ಯ ಕ್ಷೇತ್ರ ಪೊಳಲಿ. ಮಧ್ಯಮ ಪಾಂಡವನಾದ ಅರ್ಜುನನ ಶರದಿಂದ ಸೃಷ್ಟಿಸಲ್ಪಟ್ಟು ಕುದುರೆಮುಖ ಘಟ್ಟದಿಂದ ಇಳಿದು ಬರುವ ಪುಣ್ಯ ನದಿ ಫಲ್ಗುಣಿ ತಟದಲ್ಲಿ ಕಂಗೊಳಿಸುವ ಸಾವಿರ ಸೀಮೆಯ ಒಡತಿ ರಾಜರಾಜೇಶ್ವರಿಯ ಅಡಂಬೊಲವಾದ ಪೊಳಲಿ ಕ್ಷೇತ್ರದಲ್ಲಿ ನಡೆಯುವ 1 ತಿಂಗಳ ಜಾತ್ರೆ ಪೊಳಲಿಯ ಚೆಂಡು ಜಗತ್ ಪ್ರಸಿದ್ಧವಾದುದು.

ಸುಮೇದ ಮಹಾಮುನಿಯ ಆದೇಶದಂತೆ ಪುಣ್ಯಪುರುಷರಾದ ಸುರಥ ಮಹಾರಾಜ ಹಾಗೂ ಸಮಾದಿ ವೈಶ್ಯರು ಪ್ರತಿಷ್ಠಾಪಿಸಿದ ಈ ಪುಣ್ಯ ಕ್ಷೇತ್ರಕ್ಕೆ ಸುಮಾರು 2000 ವರ್ಷಗಳ ಇತಿಹಾಸವಿದೆ. ಮೀನ ಸಂಕ್ರಮಣ (ಮಾರ್ಚ್ 14 )ರಿಂದ ಮೇಷ ಸಂಕ್ರಮಣವಾದ ( ಎಪ್ರಿಲ್ 14 )ವರೆಗೆ 1 ತಿಂಗಳ ಜಾತ್ರೆ ಇಲ್ಲಿ ಸಂಪನ್ನಗೊಳ್ಳುತ್ತದೆ. ಆದರೆ ಪೂರ್ತಿ 30 ದಿನಗಳ ಜಾತ್ರೆ ಪ್ರತಿ ವರ್ಷ ನಡೆಯುವುದಿಲ್ಲ. 27 ರಿಂದ 30 ದಿನಗಳಲ್ಲಿ ಯಾವುದಾದರೊಂದು ದಿನ ನಿಶ್ಚಯವಾಗುತ್ತದೆ. ಮಾರ್ಚ್ 14 ರಂದು ಧ್ವಜಾರೋಹಣವಾಗಿ ಮರುದಿನ ಉತ್ಸವ ಬಲಿ ಮುಗಿದು ರಥೋತ್ಸವ ಆಗುವವರೆಗೆ ಎಷ್ಟು ದಿನದ ಜಾತ್ರೆ ಎಂದು ಕ್ಷೇತ್ರದ ತಂತ್ರಿ ವರ್ಗದವರಿಗಾಗಲಿ ಅರ್ಚಕರಿಗಾಗಲಿ ಆಡಳಿತ ಮಂಡಳಿಯವರಿಗಾಗಲಿ ತಿಳಿದಿರುವುದಿಲ್ಲ ಅದು ತಿಳಿದು ಬರುವುದು "ಆರಾಡ ಲೆಪ್ಪುನಿ ಅಥವಾ ಕುದಿ ಲೆಪ್ಪುನಿ" ಎನ್ನುವ ವಿಶಿಷ್ಟವಾದ ಕಾರ್ಯಕ್ರಮ ನಡೆದಾಗಲೆ. ಇದು ಪೊಳಲಿಯ ವಿಶೇಷತೆಗಳಲ್ಲಿ ಒಂದು.

ಪೊಳಲಿ ದೇವಸ್ಥಾನವು ಅನಾದಿಕಾಲದಲ್ಲಿ ಮೂಡಬಿದ್ರೆ ಚೌಟರಸರ ಆಳ್ವಿಕೆಗೆ ಒಳಪಟ್ಟಿತ್ತು. ಆದುದರಿಂದ ಅದರ ಜಾತ್ರೆಯ ದಿನ ಮೂಡಬಿದ್ರೆಯಲ್ಲಿ ನಿಶ್ಚಯವಾಗುತ್ತಿತ್ತು ಈಗಲೂ ಅದು ನಿಶ್ಚಯವಾಗುವುದು ಮೂಡಬಿದ್ರೆ ಅರಸರ ಆಳ್ವಿಕೆಗೆ ಒಳಪಟ್ಟ ಪುತ್ತಿಗೆಯ ಜೋಯಿಸರ ಕವಡೆಯ ಮಣೆಯಲ್ಲಿ ಇದಕ್ಕೂ ಒಂದು ವಿಶೇಷವಾದ ಕ್ರಮವಿದೆ. ಪೊಳಲಿ ಕ್ಷೇತ್ರದ ನಟ್ಟೋಜ ಮನೆತನದ ವ್ಯಕ್ತಿಯೊಬ್ಬರು ಧ್ವಜಾರೋಹಣದ ಮುಂಚಿನ ದಿನ ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಿ ಪುತ್ತಿಗೆ ಜೋಯಿಸರ ಮನೆಗೆ ಪ್ರಯಾಣ ಬೆಳೆಸುತ್ತಾರೆ ( ಹಿಂದಿನ ಕಾಲದಲ್ಲಿ ಕಾಲ್ನಡಿಗೆಯಲ್ಲಿ ಈಗ ವಾಹನದಲ್ಲಿ) ಜೋಯಿಸರ ಮನೆಗೆ ಬಂದ ನಟ್ಟೋಜರನ್ನು ಗೌರವ ಪೂರ್ವಕವಾಗಿ ಸತ್ಕರಿಸಿ ಮರುದಿನ ಬೆಳಿಗ್ಗೆ, ಅವರ ಜ್ಯೋತಿಷ್ಯದ ಮಣೆಯ ಕವಡೆಯಲ್ಲಿ ಜಾತ್ರೆಯ ದಿನವನ್ನು ನಿಶ್ಚಯಿಸಿ ಗೌಪ್ಯವಾಗಿ ಅವರ ಕಿವಿಯಲ್ಲಿ ತಿಳಿಸುತ್ತಾರೆ. ಧ್ವಜಾರೋಹಣದ ದಿನ ಸಂಜೆ ಕ್ಷೇತ್ರಕ್ಕೆ ಬಂದ ನಟ್ಟೋಜರು ಜ್ಯೋತಿಷ್ಯರು ನೀಡಿದ ಹಿಂಗಾರದ ಹಾಳೆಯನ್ನು ದೇವರ ಗರ್ಭಗುಡಿಯಲ್ಲಿ ಇರಿಸಿ ಪ್ರಸಾದ ಸ್ವೀಕರಿಸುತ್ತಾರೆ. ಆ ದಿವಸ ರಾತ್ರಿ ಉಳ್ಳಾಳ ಶ್ರೀ ಭಗವತೀ ಕ್ಷೇತ್ರಕ್ಕೊಳಪಟ್ಟ ತೀಯಾ ಸಮಾಜ ಬಾಂಧವರ ಕೇಂದ್ರ ಸ್ಥಾನವಾದ ಅಡ್ಡರು ನಂದ್ಯ ಕ್ಷೇತ್ರದಿಂದ ಶ್ರೀ ಭಗವತೀ ಮಾತೆಯ ಸಾನಿಧ್ಯ (ದೀಪ ಸಂಕಲ್ಪ) ಶ್ರೀ ಭದ್ರಕಾಳಿ ದೇವಿಯ ಬಿಂಬ, ಅರಸು ದೈವದ ಆಯುಧ, ಬೆತ್ತದಿಂದ ತಯಾರಿಸಿದ ಕದ್‌ದ್ ಮುಡಿಯೊಂದಿಗೆ ಫಲ್ಕುಣಿ ನದಿಯನ್ನು ದೋಣಿಯ ಮೂಲಕ ದಾಟಿ ಸೂಟೆಯ ಬೆಳಕಿನಲ್ಲಿ ನಡೆದುಕೊಂಡು ಮಹಮ್ಮಾಯಿ ಕಟ್ಟೆಯನ್ನು ಉತ್ತರಿಸಿ ಸಮಸ್ತ ಭಗವದ್ಭಕ್ತರು ಹಾಗೂ ತೀಯಾ ಸಮಾಜ ಭಾಂದವರೊಂದಿಗೆ ಕ್ಷೇತ್ರಕ್ಕೆ ಆಗಮಿಸುತ್ತಾರೆ.

ಅವರನ್ನು ಕ್ಷೇತ್ರದ ಆಡಳಿತ ಮಂಡಳಿಯವರು ಗೌರವ ಪೂರ್ವಕವಾಗಿ ಬರಮಾಡಿಕೊಳ್ಳುತ್ತಾರೆ ಉಳಿಪ್ಪಾಡಿ

ಗುತ್ತಿನಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಆಗಮಿಸುತ್ತದೆ. ಅದನ್ನು ಕ್ಷೇತ್ರದ ಆಡಳಿತ ಮಂಡಳಿಯ ಪ್ರಮುಖರು ಗೌರವ ಪೂರ್ವಕವಾಗಿ ಸ್ವಾಗತಿಸಿ ಕ್ಷೇತ್ರಕ್ಕೆ ಬರಮಾಡಿಕೊಳ್ಳುತ್ತಾರೆ. ಆ ಬಳಿಕ ಧ್ವಜಾರೋಹಣವಾಗುತ್ತದೆ. ಮರುದಿನ ಬೆಳಿಗ್ಗೆ ಕಂಚೀ ಬಲಿ ಹೊರಡುತ್ತದೆ. ಕಂಚೀಲ ಸೇವೆಯ ಭಕ್ತರಿಂದೊಡಗೂಡಿ ಕಂಚೀಲ ಬಲಿ ಮುಗಿದು ರಥೋತ್ಸವ ಜರಗುತ್ತದೆ. ಆ ಬಳಿಕ ಕ್ಷೇತ್ರದ ಆಡಳಿತ ಮಂಡಳಿಯವರ ಒಪ್ಪಿಗೆ ಬಂದ ಬಳಿಕ ನಂದ್ಯದ ಗುರಿಕಾರರು ಹಾಗೂ ತೀಯಾ ಸಮಾಜದ ಪ್ರಮುಖರು ಭದ್ರಕಾಳಿ ಹಾಗೂ ಅರಸು ದೈವದ ಅಲಂಕಾರ ಗೊಂಡ ಪಂಬದ ಬಂದುಗಳನ್ನು ರಾಜಾಂಗಣಕ್ಕೆ ಕರೆದುಕೊಂಡು ಬಂದು ಅಲ್ಲಿ "ಕದುರ್ಮುಡಿ ಏರುನಿ" ಎನ್ನುವ ವಿಶಿಷ್ಟವಾದ ಕಾರ್ಯಕ್ರಮ ಜರಗುತ್ತದೆ.

ನಂದ್ಯ ಕ್ಷೇತ್ರದಿಂದ ಬಂದ ಕದುರ್ಮುಡಿಯಲ್ಲಿ ಪ್ರತಿಷ್ಠಾಪಿಸಿದ ಶ್ರೀ ಭದ್ರಕಾಳಿ ದೇವಿಯ ಬಿಂಬವನ್ನು ಭದ್ರಕಾಳಿ ದೇವಿಯ ಅಲಂಕಾರದಲ್ಲಿರುವ ಪಂಬದ ಬಂಧುಗಳು ತಲೆಯಲ್ಲಿ ಧರಿಸಿ ನಂದ್ಯದ ಗುರಿಕಾರರು ಅದನ್ನು ಮೂರು ಸುತ್ತು ತಿರುಗಿಸುತ್ತಾರೆ ಅದನ್ನು ಕೆಳಗಿಸಿದ ಪಂಬದ ಬಂಧುಗಳು ಜಾಗಟೆ ಬಾರಿಸುತ್ತಾ ತೀಯಾ ಸಮಾಜದವರೊಂದಿಗೆ ಪ್ರಮಾಣ ಬಾವಿಗೆ ಒಂದು ಸುತ್ತು ಬಂದು ಕ್ಷೇತ್ರದ ಗೋಪುರದ ಬಳಿ ಬರುತ್ತಾರೆ ಆಗ ನಟ್ಟೋಜರು ಹಿಂಗಾರದ ಹಾಳೆಯನ್ನು ಹಿಡಿದುಕೊಂಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹಿಂಬದಿಯಲ್ಲಿ ನಿಂತಿರುತ್ತಾರೆ. ಅಲ್ಲಿಗೆ ಕ್ಷೇತ್ರದ ಸೇರಿಗಾರರಾದ ಶ್ರೀ ಚಂದ್ರಶೇಖರ ದೇವಾಡಿಗ (ಅಪ್ಪು ಸೇರಿಗಾರರು)ಬರುತ್ತಾರೆ. ಅವರ ಕೈಗೆ ಹಿಂಗಾರ ಹಾಳೆಯನ್ನು ನಟ್ಟೋಜರು ಕೊಟ್ಟು ಅರಾಡದ ದಿನವನ್ನು ಗೌಪ್ಯವಾಗಿ ಅವರ ಕಿವಿಯಲ್ಲಿ ತಿಳಿಸುತ್ತಾರೆ. ಅವರು ಅಂಗಣಕ್ಕೆ ಬಂದು ಭದ್ರಕಾಳಿ ಅಲಂಕಾರದಲ್ಲಿರುವ ಪಂಬದ ಬಂಧುಗಳ ಕಿವಿಯಲ್ಲಿ ಅರಾಡದ ದಿನವನ್ನು ಘೋಷಿಸುತ್ತಾರೆ. ಸಾವಿರ ಸಾವಿರ ಸಂಖ್ಯೆಯ ಭಕ್ತಾದಿಗಳು ಅದನ್ನು ತದೇಕ ಚಿತ್ತದಿಂದ ಆಲಿಸುತ್ತಾರೆ. ಆಗ ಪೊಳಲಿ ಕ್ಷೇತ್ರದ ಜಾತ್ರೆಯ ವಿವರ ಗೊತ್ತಾಗುತ್ತದೆ. ಆ ಬಳಿಕ ಪಂಬದ ಬಂಧುಗಳನ್ನು ತೀಯಾ ಸಮಾಜದವರು ಗುರಿಕಾರರು, ಅಖಿಲೇಶ್ವರ ಕ್ಷೇತ್ರಕ್ಕೆ, ಕರೆದುಕೊಂಡು ಬಂದು ಅಲ್ಲಿಯೂ ಅರಾಡ ಕರೆಯಿಸುತ್ತಾರೆ.

ಮರುದಿನ ಬೆಳಿಗ್ಗೆ, ಕ್ಷೇತ್ರದ ಅಂಗಣದಲ್ಲಿ ಮೊದಲ ದಿನದಂತೆಯೇ ಆರಾಡ ಕರೆದು ಆ ಬಳಿಕ ಪಂಬದ ಬಂಧುಗಳನ್ನು ಮಹಮ್ಮಾಯಿ ಕಟ್ಟೆ (ಸೂಲಕ್ಕಿಪಡು)ಗೆ ಕರೆದುಕೊಂಡು ಬಂದು ಅಲ್ಲಿ ಆರಾಡ ಕರೆಯಿಸಿ ಫಲ್ಗುಣಿ ನದಿಯನ್ನು ದೋಣಿಯ ಮೂಲಕ ದಾಟಿಸಿ ನಂದ್ಯ ಕ್ಷೇತ್ರಕ್ಕೆ ಕರೆದುಕೊಂಡು ಬಂದು ಅಲ್ಲಿ ಭದ್ರಕಾಳೀ ಕ್ಷೇತ್ರದ ಎದುರು ಆರಾಡ ಕರೆಯುತ್ತಾರೆ. ಪೊಳಲಿ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರಕ್ಕೆ ಹೋಗಿ ಆರಾಡ ಕರೆಯುವುದು ನಂದ್ಯ ಕ್ಷೇತ್ರದಲ್ಲಿ ಮಾತ್ರ. ಆ ಬಳಿಕ ಪಂಬದ ಬಂಧುಗಳನ್ನು ಹಾಗೂ ವಾಲಗದವರನ್ನುದವರನ್ನು ಹಾಗೂ ಇತರ ಸೇವಾಕರ್ತರನ್ನು ನಂದ್ಯದ ಮನೆಯಲ್ಲಿ ಗೌರವಪೂರ್ವಕವಾಗಿ ಸತ್ಕರಿಸಿ ಸೂಕ್ತ ಸಂಭಾವನೆ ನೀಡಿ ಕಳುಹಿಸಿಕೊಡಲಾಗುತ್ತದೆ. ಆರಾಡ ಕರೆಯುವ ಎಲ್ಲಾ ಖರ್ಚನ್ನು ನಂದ್ಯದ ಮನೆಯವರೇ ಭರಿಸುತ್ತಾರೆ. ಇದು ಪೊಳಲಿ ಶ್ರೀ ರಾಜರಾಜೇಶ್ವರಿಗೂ ಶ್ರೀ ಭಗವತಿ ಮಾತೆಗೂ ಇರುವ ತೀಯಾ ಸಮಾಜ ಬಾಂಧವರಿಗೂ ನಂದ್ರಕ್ಷೇತ್ರಕ್ಕೂ ಪೊಳಲಿ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧ. ಆ ಬಳಿಕ ಪ್ರತಿ ಐದು ದಿವಸಗಳಿಗೊಮ್ಮೆ ದಂಡಮಾಲೆ ಎನ್ನುವ ವಿಶೇಷ ಜಾತ್ರೆ ಕೊನೆಗೆ ೭ ದಿನ ಮೊದಲು ಚೆಂಡು ಪ್ರಾರಂಭವಾಗಿ 5 ದಿನ ಚೆಂಡಿನ ಉತ್ಸವ. ಅದರ ಮರುದಿನ ಬ್ರಹ್ಮರಥೋತ್ಸವ ಕೊನೆಯ ದಿನ ಅವಭ್ರತ ಸ್ಥಾನ ಹೀಗೆ ಪೊಳಲಿಯ ಜಾತ್ರೆ ಸಂಪನ್ನಗೊಳ್ಳುತ್ತದೆ. ಇಂತಹ ಅಪರೂಪದ ಕ್ರಮ ಪೊಳಲಿ ಕ್ಷೇತ್ರದಲ್ಲಲ್ಲದೆ ಬೇರೆಲ್ಲೂ ಕಾಣಸಿಗದು. ಇದು ಪುಳಿನಾಪುರದ ಶ್ರೀಲಲಿತೆ ರೂಪಿಣಿ. ತಾಯಿ ರಾಜರಾಜೇಶ್ವರಿಯ ಮಹಿಮೆ.

ಬಿ ಜನಾರ್ದನ ಅಮ್ಮುಂಜೆ

Leave a Comment