ಬಂಟ್ವಾಳ :ತುಂಬೆ ಬಿ ಎ ವಿದ್ಯಾ ಸಂಸ್ಥೆಯ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಪೋಕ್ಸೋ ಕಾಯ್ದೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಗ್ಗೆ ಕಾನೂನು ಅರಿವು ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವಿದ್ಯಾ ಕೆ. ಇವರು, ಪೋಕ್ಸೋ ಕಾಯ್ದೆ ಜಾರಿಗೆ ಬಂದದ್ದು 2012ರಲ್ಲಿ. ಇದರ ಉದ್ದೇಶ ಮಕ್ಕಳ ಮೇಲೆ ನಡೆಯುವ ಲೈಂಗಿಕ ಅಪರಾಧಗಳನ್ನು, ಶೋಷಣೆಗಳನ್ನು ಮತ್ತು ಅತ್ಯಾಚಾರಗಳನ್ನು ಪರಿಣಾಮಕಾರಿಯಾಗಿ ತಡೆಯುವುದು ಹಾಗೂ ಭಾರತದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಅಡಿಯಲ್ಲಿ ಮಗುವನ್ನು ಪುರುಷನಾಗಿದ್ದರೆ 21 ವರ್ಷವನ್ನು ಪೂರ್ಣಗೊಳಿಸಿದ ವ್ಯಕ್ತಿ ಮತ್ತು ಹೆಣ್ಣಾಗಿದ್ದರೆ 18 ವರ್ಷಗಳನ್ನು ಪೂರ್ಣಗೊಳಿಸಿದ ವ್ಯಕ್ತಿ ಎಂದು ಹಾಗೂ ಈ ಕಾಯ್ದೆಯು ಕಾನೂನಿನ ವಯಸ್ಸಿನ ಮಿತಿಗಿಂತ ಕೆಳಗಿನ ಮಕ್ಕಳ ನಡುವೆ ನಡೆಯುವ ಯಾವುದೇ
ವಿವಾಹವು ಶೂನ್ಯ ಮತ್ತು ಅನೂರ್ಜಿತವಾಗಿದೆ ಎಂದು ಹೇಳಿದರು.
ವಿದ್ಯಾ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ್ ರೈ ಬಿ. ಮಾತನಾಡಿ,ಪೋಕ್ಸೋ ಕಾಯ್ದೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತ ಕಾನೂನು ಅರಿವು ಕಾರ್ಯಕ್ರಮ ಇಂದಿನ ಸಂದರ್ಭದಲ್ಲಿ ಬಹಳ ಮುಖ್ಯವಾದದ್ದು ಹಾಗೂ ಆ ಕಾಯಿದೆಯ ಬಗ್ಗೆ ತಿಳಿದುಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾ ಸಂಸ್ಥೆಯ ಶಿಕ್ಷಕ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ನವೀನ ರಾವ್ ಟಿ. ಸ್ವಾಗತಿಸಿ, ಶಿಕ್ಷಕಿ ಸೌಮ್ಯ ವಂದಿಸಿದರು. ಅಧ್ಯಾಪಕ ರಮೇಶ್ ಕಾರ್ಯಕ್ರಮ ನಿರೂಪಿಸಿದರು.









