ಬಂಟ್ವಾಳ: ಸರಕಾರಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ತಾಲೂಕು ಶಾಖೆಯ ವತಿಯಿಂದ ಶುಕ್ರವಾರ ಸಂಜೆ ಬಿ.ಸಿ.ರೋಡಿನ ತಾಲೂಕು ಆಡಳಿತ ಸೌಧದಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು ಸಂಘಟನೆಯ ಹೋರಾಟದ ಉದ್ದೇಶದ ಬಗ್ಗೆ ಮಾತನಾಡಿ ಸರಕಾರಿ ನೌಕರರ ಸಂಘ ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಸಂಘನೆಯಾಗಿದೆ. ೭ನೇ ವೇತನ ಆಯೋಗ ವರದಿ ಜಾರಿ, ಎನ್ಪಿಎಸ್ ರದ್ದು ಪಡಿಸಿ ಹಳೆ ಪಿಂಚಣಿ ಯೋಜನೆಯ ಮರು ಜಾರಿ, ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹೋರಾಟದ ಮೊದಲ ಹಂತಾಗಿ ಶಾಸಕರಿಗೆ ಮನವಿ ಸಲ್ಲಿಸಿ 15 ತಾರೀಖಿನಿಂದ ಆರಂಭವಾಗುವ ಅಧಿವೇಶನದಲ್ಲಿ ಸರಕಾರಿ ನೌಕರರ ಪರವಾಗಿ ಧ್ವನಿ ಎತ್ತಿ ಈ ಎಲ್ಲಾ ಬೇಡಿಕೆಗಳನ್ನು ಸರಕಾರ ಈಡೇರಿಸುವಂತೆ ಒತ್ತಾಯಸಲು ಮನವಿ ಸಲ್ಲಿಸಿ ಆಗ್ರಹಿಸಲಾಗಿದೆ. ಇದೀಗ ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ಹೋರಾಟಕ್ಕೆ ಸರಕಾರಿ ನೌಕರರು ಸಂಘಟಿತರಾಗಿ ಕೈ ಜೋಡಿಸುವಂತೆ ಮನವಿ ಮಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಮಾತನಾಡಿ ಸರಕಾರಿ ನೌಕರರಿಂದಾಗಿ ಸರ್ಕಾರದ ಯೋಜನೆಗಳು ಯಶಸ್ವಿಯಾಗಿ ಜಾರಿಗೊಳ್ಳುತ್ತಿವೆ, ಆದರೆ ನೌಕರರ
ವೇತನದ ವಿಚಾರ ಬಂದಾಗ ಸರಕಾರ ಮೌನವಹಿಸುತ್ತಿದೆ. ಸುತ್ತಲಿನ ರಾಜ್ಯಗಳಾದ ಕೇರಳ, ತಮಿಳುನಾಡು ಆಂಧ್ರ ಪ್ರದೇಶಗಳಲ್ಲಿ ಬಜೆಟಿನ ಶೇ.20 ಹಣವನ್ನು ಸರಕಾರ ನೌಕರರಿಗೆ ವೇತನ ಹಾಗೂ ಸವಲತ್ತುಗಳನ್ನು ನೀಡಲು ಮೀಸಲಿಡುತ್ತವೆ, ಆದರೆ ನಮ್ಮ ರಾಜ್ಯದಲಿ ಇದು ಒಂದಕಿಗಿಂತ ಕೆಳಗಿರುವುದು ಬೇಸರದ ಸಂಗತಿ. ಐದು ವರ್ಷಕ್ಕೊಮ್ಮೆ ವೇತನ ಆಯೋಗ ಪುನರ್ ರಚನೆಯಾಗಬೇಕಿರುವುದು ನಮ್ಮ ಹಕ್ಕು, ನಾವು ಭಿಕ್ಷೆ ಬೇಡುತ್ತಿಲ್ಲ, ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ ಎಂದರು. ಕೋಶಾಧಿಕಾರಿ ಬಸಯ್ಯ ಅಲಿಮಟ್, ವಿವಿಧ ಸಂಘಟನೆಗಳ ಪ್ರಮುಖರಾದ ಜೋಯಲ್ ಲೋಬೋ, ಮಂಜುನಾಥ್ ಕೆ.ಎಚ್., ಲೋಕನಾಥ ಶೆಟ್ಟಿ, ರಾಜೇಂದ್ರ ರೈ, ಇಂದು ಶೇಖರ್, ಅನಿಲ್ ಕೆ. ಪೂಜಾರಿ, ಪ್ರೇಮ, ಅಕ್ಷರ ದಾಸೋಹ ನಿರ್ದೆಶಕರಾದ ನೋಣಯ್ಯ ನಾಯ್ಕ್, ಪ್ರಮುಖರಾದ ರಮೆಶ್ ನಾಯಕ್ ರಾಯಿ, ಫ್ರಾನ್ಸಿಸ್ ಡೇಸಾ, ಕೃಷ್ಣ ಮೂರ್ತಿ, ಅಂಬಾಪ್ರಸಾದ್, ಜಗದೀಶ್ ರೈ, ಶ್ರೀಮತಿ, ಶಶಿಕಾಂತ, ಲ್ಯಾನ್ಸಿ, ಅಜಿತ್, ಬಸವರಾಜ್, ಮುಸ್ತಫಾ ನವೀನ್ ಕುಮಾರ್ ಮತ್ತಿತರ ಪ್ರಮುಖರು ಸೇರಿದಂತೆ ವಿವಿಧ ಇಲಾಖೆಗಳ ನೌಕರರು ಭಾಗವಹಿಸಿದ್ದರು. ಕಾರ್ಯದರ್ಶಿ ಸಂತೋಷ್ ಕುಮಾರ್ ತುಂಬೆ ಸ್ವಾಗತಿಸಿ, ವಂದಿಸಿದರು.









