ಬಂಟ್ವಾಳ: ಕುವೆಂಪು ಅವರಿಗೆ ಭೌಗೋಳಿಕ, ರಾಜಕೀಯ ರಾಷ್ಟ್ರೀಯತೆಯ ಮೇಲೆ ಆಸಕ್ತಿಯಿರಲಿಲ್ಲ. ಕವಿ ಮತ್ತು ಸಾಂಸ್ಕೃತಿಕ ವ್ಯಕ್ತಿತ್ವಗಳ ಆದರ್ಶದ ಮಂತ್ರಿಮಂಡಲ ರೂಪುಗೊಳ್ಳಬೇಕು. ಅಂತಹ ಸಾಂಸ್ಕೃತಿಕ ಕರ್ನಾಟಕಕ್ಕೆ ಗಡಿಗಳ ತೊಡಕಿಲ್ಲ. ನೀ ಮೆಟ್ಟುವ ನೆಲ ಅದೇ ಕರ್ನಾಟಕ ಎಂದವರು ಕುವೆಂಪು. ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಆಶಯದ ಮೂಲಕ ಭಾವನಾತ್ಮಕವಾಗಿ ನಾವು ಕನ್ನಡಿಗರಾಗಿರಬೇಕು ಎಂಬುದು ಕುವೆಂಪು ಆಶಯವಾಗಿತ್ತು ಎಂದು ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಡಾ.ಧನಂಜಯ ಕುಂಬ್ಳೆ ಹೇಳಿದರು.
ಅವರು ಬುಧವಾರ ಎಸ್ ವಿ ಎಸ್ ಕಾಲೇಜಿನ ಸಭಾಂಗಣದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳಿ ಹಾಗೂ ಕನ್ನಡ ವಿಭಾಗ ಎಸ್ ವಿ ಎಸ್ ಕಾಲೇಜು ಬಂಟ್ವಾಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಹೊಸತಲೆಮಾರಿಗೆ ಕುವೆಂಪು ದರ್ಶನ ಎಂಬ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಮಾನವತೆಯ ಪ್ರತಿಪಾದನೆಯೇ ಕುವೆಂಪು ಸಾಹಿತ್ಯದ ಮೂಲ ಉದ್ದೇಶ. ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿಯ ಪಂಚಸೂತ್ರಗಳನ್ನು ಅರ್ಥಮಾಡಿಕೊಂಡು ವಿಶ್ವಾತ್ಮಕವಾಗಿ ಮನುಷ್ಯ ಬೆಳೆಯಬೇಕು ಎಂಬುದು ಕುವೆಂಪು ಆಶಯ. ಅವರ ಶ್ರೀರಾಮಾಯಣ ದರ್ಶನಂ ರಾಮಾಯಣದ ನಿರ್ಲಕ್ಷಿತ
ಪಾತ್ರಗಳನ್ನು ಮುನ್ನೆಲೆಗೆ ತಂದು ಅವುಗಳಿಗೆ ಘನತೆಯನ್ನು ತಂದುಕೊಟ್ಟಿದೆ. ಪಾಪಿಯಲ್ಲೂ ಪರಿವರ್ತನೆಗೆ ಅವಕಾಶವಿದೆ ಎಂಬುದನ್ನು ಸಾರಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಪ್ರಾಂಶುಪಾಲ ಸಂಸ್ಕೃತ ಪ್ರಾಧ್ಯಾಪಕ ಕಾಶೀನಾಥ ಶಾಸ್ತ್ರಿ ಮಾತನಾಡಿ ಕುವೆಂಪು ಅವರು ಉತ್ತಮ ಆಡಳಿತಗಾರರೂ ಅಗಿದ್ದರು. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಪ್ರಸಾರಾಂಗವನ್ನು ಆರಂಭಿಸಿ ಮಹತ್ವದ ಕೃತಿಗಳ ಪ್ರಕಟಣೆಗೆ ಕಾರಣರಾಗಿದ್ದಾರೆ ಎಂದರು.
ಕಾರ್ಯಕ್ರಮದ ಸಂಯೋಜಕ, ಉಜಿರೆ ಎಸ್ ಡಿಯಂ ಕಾಲೇಜಿನ ಪ್ರಾಧ್ಯಾಪಕ ಡಾ. ರಾಜಶೇಖರ ಹಳೆಮನೆ ಪ್ರಾಸ್ತಾವನೆಗೈದರು. ಎಸ್ ವಿ ಎಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಶಿವಣ್ಣ ಪ್ರಭು ಸ್ವಾಗತಿಸಿದರು. ಉಪನ್ಯಾಸಕ ಕಿಟ್ಟು ವಂದಿಸಿದರು.









