ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಪ್ರಯಾಣಿಕರ ಅನುಕೂಲಕ್ಕಾಗಿ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿರುವ 'ಅಶ್ವಮೇಧ' ಮಾದರಿ ಬಸ್‌ಗಳ ಸಂಚಾರವನ್ನು ಈ ವರ್ಷದ ಆರಂಭದಲ್ಲಿ ಪ್ರಾರಂಭಿಸಿದೆ. ರಾಜ್ಯದ ಹಲವು ಮಾರ್ಗದಲ್ಲಿ ಈ ಮಾದರಿ ಬಸ್‌ಗಳು ಓಡುತ್ತಿವೆ. ಈಗ ಈ ಬಸ್‌ಗಳು ರಾಜ್ಯದ ಗಡಿದಾಟಲು ಮುಂದಾಗಿದೆ. ಕಾಸರಗೋಡಿಗೆ 'ಅಶ್ವಮೇಧ' ಬಸ್‌ಗಳನ್ನು ಓಡಿಸಲು ಕೆಎಸ್ಆರ್‌ಟಿಸಿ ಚಿಂತನೆ ನಡೆಸಿದೆ.
ಮಂಗಳೂರು-ಕಾಸರಗೋಡು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖವಾದ ರಸ್ತೆ ಮಾರ್ಗವಾಗಿದೆ. ಈ ಮಾರ್ಗದಲ್ಲಿ 'ಅಶ್ವಮೇಧ' ಸೂಪರ್ ಫಾಸ್ಟ್ ಬಸ್ ಓಡಿಸಲು ಕೆಎಸ್ಆರ್‌ಟಿಸಿಯ ಮಂಗಳೂರು ಘಟಕ ಚಿಂತನೆ ನಡೆಸಿದೆ. ಇನ್ನೂ ಈ ಕುರಿತು ಒಪ್ಪಿಗೆಯನ್ನು ಪಡೆದಿಲ್ಲ.
ಜನರಿಂದಲೇ ಬೇಡಿಕೆ: ಮಂಗಳೂರು-ಕಾಸರಗೋಡು ನಡುವೆ 228 ಟ್ರಿಪ್‌ಗಳಲ್ಲಿ 34 ಕೆಎಸ್ಆರ್‌ಟಿಸಿ ಬಸ್‌ಗಳು ಸಂಚಾರ ನಡೆಸುತ್ತವೆ. ಆದರೆ ಈ ಮಾರ್ಗದಲ್ಲಿ 40ಕ್ಕೂ ಅಧಿಕ ನಿಲ್ದಾಣಗಳಿವೆ. ಆದ್ದರಿಂದ ಜನರು ಹೆಚ್ಚು ಸಮಯವನ್ನು ರಸ್ತೆಯಲ್ಲೇ ಕಳೆಯಬೇಕಿದೆ.
ಕಾಸರಗೋಡಿನ ವಿಕಾಸ ಟ್ರಸ್ಟ್‌ನ ರವಿ ನಾರಾಯಣ ಗುಣಾಜೆ ಕೆಎಸ್ಆರ್‌ಟಿಸಿಯ ಬೆಂಗಳೂರು ಕೇಂದ್ರ ಕಛೇರಿಗೆ ಪತ್ರವೊಂದನ್ನು ಬರೆದಿದ್ದರು. ಮಂಗಳೂರು-ಕಾಸರಗೋಡು ಮಾರ್ಗದಲ್ಲಿ 'ಅಶ್ವಮೇಧ' ಸೂಪರ್ ಫಾಸ್ಟ್ ಬಸ್ ಓಡಿಸಿದರೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದ್ದರು.
ಬೆಂಗಳೂರು ಕೇಂದ್ರ ಕಛೇರಿ ಈ ಕುರಿತು ಪರಿಶೀಲನೆ ನಡೆಸುವಂತೆ ಮಂಗಳೂರು ವಿಭಾಗಕ್ಕೆ ಪತ್ರವನ್ನು ಕಳಿಸಿತ್ತು. ಕೆಎಸ್ಆರ್‌ಟಿಸಿ ಮಂಗಳೂರು ವಿಭಾಗ 'ಅಶ್ವಮೇಧ' ಮಾದರಿ ಬಸ್‌ಗಳನ್ನು ವಿಭಾಗಕ್ಕೆ ನೀಡಿದರೆ ಈ ಮಾರ್ಗದಲ್ಲಿ ಓಡಿಸಲಾಗುತ್ತದೆ ಎಂದು ಹೇಳಿದೆ.
ಮಂಗಳೂರು-ಕಾಸರಗೋಡು ನಡುವಿನ ದೂರ ಸುಮಾರು 50 ಕಿ. ಮೀ. ಪ್ರತಿದಿನ ಸಾವಿರಾರು ಜನರು ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ಕಾರಣಕ್ಕೆ ಎರಡು ನಗರದ ನಡುವೆ ಸಂಚಾರ ನಡೆಸುತ್ತಾರೆ. ಅದರಲ್ಲೂ
ಸಂಚಾರಕ್ಕೆ ಬಸ್ ಅವಲಂಬಿಸಿರುವ ಜನರೇ ಹೆಚ್ಚು.
ಆದರೆ ಬಸ್‌ಗಳು ಹಲವು ಕಡೆ ನಿಲುಗಡೆಗೊಳ್ಳುವುದರಿಂದ ಸರಿಯಾದ ಸಮಯಕ್ಕೆ ಶಾಲಾ-ಕಾಲೇಜು, ಕಛೇರಿಗಳಿಗೆ ತೆರಳಲು ಆಗುತ್ತಿಲ್ಲ ಎಂಬುದು ಜನರ ದೂರು. ಆದ್ದರಿಂದ ನಿಗದಿತ ನಿಲ್ದಾಣಗಳನ್ನು ಮಾತ್ರ ಹೊಂದಿರುವ 'ಅಶ್ವಮೇಧ' ಮಾದರಿ ಬಸ್ ಓಡಿಸಬೇಕು ಎಂದು ಮನವಿ ಮಾಡಲಾಗಿದೆ.
ಮಂಗಳೂರು ವಿಭಾಗದಲ್ಲಿ ಸದ್ಯ 35ಕ್ಕೂ ಹೆಚ್ಚು ಅಶ್ವಮೇಧ ಮಾದರಿ ಬಸ್‌ಗಳಿವೆ. ಮಂಗಳೂರು-ಮೈಸೂರು, ಮಂಗಳೂರು-ಹಾಸನ-ಬೆಂಗಳೂರು ಮತ್ತು ಮಂಗಳೂರು-ಉತ್ತರ ಕರ್ನಾಟಕ ಭಾಗಕ್ಕೆ ಈ ಬಸ್‌ಗಳು ಸಂಚಾರವನ್ನು ನಡೆಸುತ್ತಿವೆ. ಈಗ ಹೆಚ್ಚುವರಿ ಬಸ್ ನೀಡಿದರೆ ಮಂಗಳೂರು-ಕಾಸರಗೋಡು ಮಾರ್ಗದಲ್ಲಿ ಓಡಿಸಲು ಕೆಎಸ್ಆರ್‌ಟಿಸಿ ತೀರ್ಮಾನಿಸಿದೆ.
ಅಶ್ವಮೇಧ ಬಸ್‌ಗೆ ಬೇಡಿಕೆ ಬಂದಿರುವುದನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಅಶ್ವಮೇಧ ಮಾದರಿಯ 10 ಬಸ್‌ಗಳನ್ನು ನೀಡುವಂತೆ ಕೇಂದ್ರ ಕಛೇರಿಗೆ ಪತ್ರವನ್ನು ಬರೆದಿದ್ದೇವೆ. ಬಸ್ ನೀಡಿದರೆ ಸೀಮಿತ ನಿಲುಗಡೆಯೊಂದಿಗೆ ಮಂಗಳೂರು-ಕಾಸರಗೋಡು ಮಾರ್ಗದಲ್ಲಿ ಬಸ್ ಓಡಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಂಗಳೂರು-ಕಾಸರಗೋಡು ನಡುವೆ ಕೆಎಸ್ಆರ್‌ಟಿಸಿ ವೊಲ್ವೋ ಬಸ್ ಸಂಚಾರವನ್ನು ಆರಂಭಿಸಿತ್ತು. 2019ರಲ್ಲಿ ಆರಂಭವಾಗಿದ್ದ ಈ ಬಸ್ ಸೇವೆ ಈಗ ರದ್ದಾಗಿದೆ. 6 ನಿಲುಗಡೆಯೊಂದಿಗೆ 14 ಟ್ರಿಪ್ ಎಸಿ ವೊಲ್ವೋ ಬಸ್ ಓಡಿಸಲಾಗುತ್ತಿತ್ತು. ಆದರೆ ಪ್ರಯಾಣಿಕರ ಕೊರತೆ ಹಿನ್ನಲೆಯಲ್ಲಿ ಬಸ್ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.















