ಪುತ್ತೂರು : ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದಿಂದ ಶಾತಾಯುಷಿ ಬಿ.ಎಸ್.ಕುಲಾಲ್‌ರವರಿಗೆ ಸಾರ್ವಜನಿಕ ನುಡಿನಮನ

Coastal Bulletin
ಪುತ್ತೂರು : ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದಿಂದ ಶಾತಾಯುಷಿ ಬಿ.ಎಸ್.ಕುಲಾಲ್‌ರವರಿಗೆ ಸಾರ್ವಜನಿಕ ನುಡಿನಮನ

ಪುತ್ತೂರು: ನಿವೃತ್ತಿ ಹೊಂದಿದ ಸೈನಿಕ ಹೂವಯ್ಯ ಮತ್ತು ಕಾವೇರಿ ದಂಪತಿ ಪುತ್ರರಾಗಿ ತಾನೂ ಸೈನ್ಯಕ್ಕೆ ಸೇರಿ ಬಳಿಕ ಸರಕಾರಿ ಹುದ್ದೆಗೆ ಸೇರ್ಪಡೆಗೊಂಡು ತಹಶೀಲ್ದಾರ್ ಆಗಿ ಪದೋನ್ನತಿ ಹೊಂದಿ ನಿವೃತ್ತರಾಗಿದ್ದ ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕರೂ ಆಗಿದ್ದ ಬಂಟ್ವಾಳ ಶಂಕರನಾರಾಯಣ ಕುಲಾಲ್ (ಬಿ.ಎಸ್ ಕುಲಾಲ್) ಅವರ ನುಡಿನಮನ ಕಾರ್ಯಕ್ರಮವು ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ವತಿಯಿಂದ ಸಂಘದ ಕೇಂದ್ರ ಕಚೇರಿಯ ಕುಲಾಲ ಸಹಕಾರ ಭವನದಲ್ಲಿ ಸೆ.10ರಂದು ನಡೆಯಿತು.

ಕಾರ್ಯಕ್ರಮದ ಆರಂಭದಲ್ಲಿ ಬಿ.ಎಸ್.ಕುಲಾಲ್ ಅವರಿಗೆ ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಿ ಅವರ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು. ಬಳಿಕ ಗಣ್ಯರು ನುಡಿನಮನ ಸಲ್ಲಿಸಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿಯ ನಿರ್ದೇಶಕ,ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಯೂನಿಯನ್ ಅಧ್ಯಕ್ಷ ಹಾಗೂ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರೂ ಆಗಿರುವ ಶಶಿಕುಮಾರ್ ರೈ ಬಾಲ್ಯೂಟ್ಟು ಅವರು ಮಾತನಾಡಿ ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ತಹಸೀಲ್ದಾರ್ ಆಗಿ ನಿವೃತ್ತರಾದ ಬಿ.ಎಸ್. ಕುಲಾಲ್ ಅವರು ಸಹಕಾರ ಕ್ಷೇತ್ರ ಹಾಗೂ ಸಾಮಾಜಿಕ ರಂಗದಲ್ಲಿ ಸಲ್ಲಿಸಿದ ಸೇವೆ ಸ್ಮರಣೀಯ. ಕುಲಾಲ ಸಮಾಜದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ವಿಶೇಷವಾದದ್ದು.ಬಿ.ಎಸ್. ಕುಲಾಲ್ ಅವರು ಮಿತಭಾಷಿ ಹಾಗೂ ಸರಳ ಸ್ವಭಾವದ ವ್ಯಕ್ತಿಯಾಗಿದ್ದರು. ಮಾತನಾಡುವಾಗ ಅಗತ್ಯವಿರುವಷ್ಟೇ ಮಾತನಾಡಿ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಪ್ರತಿಕ್ರಿಯಿಸುತ್ತಿದ್ದರು. ಅವರ ವ್ಯಕ್ತಿತ್ವ ಗಂಭೀರವಾಗಿದ್ದರೂ, ಮಾತುಕತೆಯಲ್ಲಿ ಆತ್ಮೀಯತೆ ಹಾಗೂ ಸೌಜನ್ಯವನ್ನು ಹೊಂದಿದ್ದರು ಎಂದು ಸ್ಮರಿಸಿದರು.ಸಹಕಾರ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಸಲ್ಲಿಸುವ ಮೂಲಕ ಸಂಘವನ್ನು ಉನ್ನತೀಕರಣದತ್ತ ಕೊಂಡೊಯ್ಯಲು ಶ್ರಮಿಸಿದ್ದರು ಎಂದರು.

ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷಹಾಗೂ ನ್ಯಾಯವಾದಿ ಭಾಸ್ಕರ್ ಪೆರುವಾಯಿ ಅವರು ಮಾತನಾಡಿ ಬಿ.ಎಸ್. ಕುಲಾಲ್ ಮತ್ತು ನನ್ನ ನಡುವೆ ಸುಮಾರು 12 ವರ್ಷಗಳ ಆತ್ಮೀಯ ಸಂಬಂಧವಿತ್ತು. ನಾನು ಸಹಕಾರ ರಂಗಕ್ಕೆ ಬಂದ ಸಂದರ್ಭದಲ್ಲಿ ಅವರು ಅನಿವಾರ್ಯ ಕಾರಣಗಳಿಂದ ಸಹಕಾರಿ ಸಂಘದಿಂದ ದೂರವಿದ್ದರು. ಬಳಿಕ ಅವರನ್ನು ಮತ್ತೆ ಸಹಕಾರಿ ಸಂಘಕ್ಕೆ ಕರೆತಂದು, ಅವರ ಅನುಭವ ಹಾಗೂ ಮಾರ್ಗದರ್ಶನವನ್ನು ಪಡೆದುಕೊಳ್ಳುವ ಅವಕಾಶ ನಮಗೆ ದೊರೆಯಿತು. ಬಿ.ಎಸ್. ಕುಲಾಲ್ ಅವರು ಸಹಕಾರಿ ಸಂಘದ ಉನ್ನತಿಗೆ ಮಹತ್ವದ ಕೊಡುಗೆ ನೀಡಿದವರು ಸಂಘವನ್ನು ಉತ್ತಮ ವ್ಯವಸ್ಥೆಯೊಂದಿಗೆ ಮುನ್ನಡೆಸುವಲ್ಲಿ ಅವರ ಮಾರ್ಗದರ್ಶನ ಹಾಗೂ ಸಲಹೆಗಳು ನಮಗೆ ದಾರಿದೀಪವಾಗಿದ್ದವು. ತಮ್ಮ ಅಂತ್ಯದ ಸಮಯದಲ್ಲಿಯೂ ಸಂಘವನ್ನು ಸುಂದರವಾಗಿ, ಉತ್ತಮ ರೀತಿಯಲ್ಲಿ ಕಾಣಬೇಕೆಂಬ ಆಶಯವನ್ನು ಬಿ.ಎಸ್. ಕುಲಾಲ್ ಅವರು ನನ್ನೊಂದಿಗೆ ಹಂಚಿಕೊಂಡಿದ್ದರು. ಅವರ ಕನಸು ಹಾಗೂ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಾಧ್ಯವಾದಷ್ಟು ಕಾರ್ಯಗಳನ್ನು ನಾವು ಮಾಡಿದ್ದೇವೆ. ಅವರು ಕಂಡಿದ್ದ ಇನ್ನೂ ಹಲವು ಕನಸುಗಳನ್ನು ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಸಾಕಾರಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಅವರ ಆಗಲುವಿಕೆ ವೈಯಕ್ತಿಕವಾಗಿ ಹಾಗೂ ಸಂಘಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ಅವರು ಕಂಡಿದ್ದ ಎಲ್ಲಾ ಕನಸುಗಳನ್ನು ನನಸು

ಮಾಡುವ ಮೂಲಕ ಅವರ ಆಶಯಗಳನ್ನು ಮುಂದುವರಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಭಾವುಕರಾಗಿ ನುಡಿದರು.

ಕುಂಬಾರ ಗುಡಿ ಕೈಗಾರಿಕಾ ಸಹಕಾರ ಸಂಘದ ನಿರ್ದೇಶಕ ಹಾಗೂ ನಿವೃತ್ತ ಕಂದಾಯ ನಿರೀಕ್ಷಕ ಪದ್ಮಕುಮಾ‌ರ್ ಅವರು ಮಾತನಾಡಿ ಬಿ.ಎಸ್. ಕುಲಾಲ್ ಅವರು ನಿಷ್ಠೆ, ದಿಟ್ಟತನ ಹಾಗೂ ಸಮಾಜಮುಖ ಚಿಂತನೆಯೊಂದಿಗೆ ಬದುಕು ಕಟ್ಟಿಕೊಂಡ ವ್ಯಕ್ತಿಯಾಗಿದ್ದರು. 1926ರಲ್ಲಿ ಜನಿಸಿದ್ದ ಅವರು ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿಯೇ ಎಸ್ಎಸ್ಎಲ್‌ಸಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. ಅವರ ತಂದೆ ಮಾಜಿ ಸೈನಿಕರಾಗಿದ್ದು, ಆ ಸಂದರ್ಭದಲ್ಲಿ ತಾವೂ ಸೇನೆಗೆ ಸೇರುವ ಆಸೆ ಹೊಂದಿದ್ದರೂ ಅದು ಸಾಧ್ಯವಾಗಲಿಲ್ಲ. ಬಳಿಕ ತಮ್ಮದೇ ಆದ ಬದುಕನ್ನು ರೂಪಿಸಿಕೊಂಡು ಸಮಾಜಕ್ಕೆ ಮಹತ್ವದ ಕೊಡುಗೆ ನೀಡಿದರು ಎಂದು ಹೇಳಿದರು. ಸಮಾಜದ ಓರ್ವ ವ್ಯಕ್ತಿಯಾಗಿ ದಿಟ್ಟತನದಿಂದ ಮುನ್ನಡೆದ ಬಿ.ಎಸ್. ಕುಲಾಲ್ ಅವರು ಸಮಾಜಬಂಧುಗಳ ಕರೆಗೆ ಸ್ಪಂದಿಸಿ, ಸಮಾಜದ ಒಳಿತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಡುವ ಸಂಕಲ್ಪದೊಂದಿಗೆ ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನಿಸಿದರು ಎಂದರು.

ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜನಾರ್ದನ ಮೂಲ್ಯ ಸಾರ್ಯ ಅವರು ಮಾತನಾಡಿ ಬಿ.ಎಸ್ ಕುಲಾಲ್ ಅವರು ಕಟ್ಟಕಡೆಯ ವ್ಯಕ್ತಿಗೆ ಧ್ವನಿಯಾಗಿದ್ದವರು. ತನ್ನ ಜೀವನದ ಕೊನೆಯ ದಿವಸದ ತನಕ ಸಂಘ ನಿರ್ದೇಶಕರಾಗಿ ನಮ್ಮ ಜೊತೆ ಇದ್ದವರು. ಎಲ್ಲಾ ಸಮುದಾಯಕ್ಕೆ ಹತ್ತಿರವಾಗಿದ್ದವರು. ನಾವು ಕಳೆದ ವರ್ಷ ಅವರ ಕುರಿತ ಪುಸ್ತಕ ಬಿಡುಗಡೆ ಮಾಡಿದ್ದೆವು ಎಂದ ಅವರು ಬದುಕು ನಮಗೆಲ್ಲರಿಗೂ ಪ್ರೇರಣೆ ಮತ್ತು ಸ್ಪೂರ್ತಿ ಎಂದರು.

ಬಂಟ್ವಾಳ ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ,ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಮಾಜಿ ನಿರ್ದೇಶಕ ಕೃಷ್ಣಪ್ಪ ಕೆ,ನಿವೃತ್ತ ಡೆಪ್ಯೂಟಿ ಕಮಾ ಡೆಂಡ್ ಚಂದಪ್ಪ ಮೂಲ್ಯ, ಹಿರಿಯ ನಾಗರೀಕ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ  ಸೋಮಯ್ಯ ಹನಯಿನಡೆ ನುಡಿ ನಮನ ಸಲ್ಲಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜನಾರ್ದನ ಮೂಲ್ಯ ಸಾರ್ಯ ಸ್ವಾಗತಿಸಿ, ವಂದಿಸಿದರು. ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಉಪಾಧ್ಯಕ್ಷ ದಾಮೋದರ್‌ ಮೂಲ್ಯ, ನಿರ್ದೇಶಕರಾದ ಗಣೇಶ್ ಪಿ, ಪೂವಪ್ಪ ಕಡಂಬಾರು, ಸೇಸಪ್ಪ ಕುಲಾಲ್, ಪ್ರಶಾಂತ್ ಬಂಜನ್, ನಾಗೇಶ್ ಕುಲಾಲ್, ರೇಖಾ ದಿನೇಶ್, ರಂಜಿತಾ ಮತ್ತು ಸಿಬ್ಬಂದಿಗಳು ಸೇರಿದಂತೆ ಪುತ್ತೂರು, ಮಾಣಿ, ಸಿದ್ದಕಟ್ಟೆ, ವಗ್ಗ, ಬಂಟ್ವಾಳ, ವಿಟ್ಲ, ಬೆಳ್ಳಾರೆ, ಸುಳ್ಯ, ಪಾಕಾಜೆ, ಹಿರಿಯ ನಾಗರಿಕರ ಸಂಘದವರ ಸಹಿತ ಹಲವಾರು ಮಂದಿ ಆಗಮಿಸಿ ಬಿ.ಎಸ್ ಕುಲಾಲ್ ಅವರ ಭಾವ ಚಿತ್ರದ ಎದುರು ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

Leave a Comment