ಮಂಗಳೂರು; ಯಕ್ಷಗಾನದ ಏರು ಪದ್ಯದಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದ್ದ ಬಲಿಪ ಪ್ರಸಾದ್ ಭಾಗವತರು ಕಳೆದ ಒಂದು ವರ್ಷಗಳಿಂದ ಗಂಟಲಿನ ಕ್ಯಾನ್ಸರ್‌ಗೆ ಒಳಗಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಕೊನೆಯುಸಿರೆಳೆದರು.
1976ರಲ್ಲಿ ತೆಂಕುತಿಟ್ಟಿನ ಸುಪ್ರಸಿದ್ಧ ಭಾಗವತರಾದ ಬಲಿಪ ನಾರಾಯಣ ಭಾಗವತರು ಹಾಗೂ ಜಯಲಕ್ಷ್ಮಿ ದಂಪತಿಗಳ ನಾಲ್ಕನೇ ಸುಪುತ್ರರಾಗಿ ಜನಿಸಿದ ಪ್ರಸಾದರು, ತಮ್ಮ ತಂದೆಯವರಿಂದಲೇ ಭಾಗವತಿಕೆ ಕಲಿತರು . ತಮ್ಮ ತಂದೆಯ "ಬಲಿಪ ಶೈಲಿ" ಯನ್ನು ಕರಗತ ಮಾಡಿ, ರಾಗ, ತಾಳ ಹಾಗೂ ಲಯದ ಸೂಕ್ಷ್ಮತೆಯನ್ನು ಕರಗತ ಮಾಡಿಕೊಂಡರು.
ಮೂಡಬಿದಿರೆ ತಾಲೂಕಿನ ಮಾರೂರು ನಿವಾಸಿಯಾಗಿರುವ ಬಲಿಪ ಪ್ರಸಾದ್ (46) ಕಟೀಲು ಮೇಳದ ಹಿರಿಯ ಭಾಗವತರಾಗಿದ್ದರು. ಸುಪ್ರಸಿದ್ಧ ಭಾಗವತರಾದ ಬಲಿಪ ಪ್ರಸಾದ್ ಭಟ್ ನಿಧನರಾದ ಆಘಾತಕಾರಿ ವರದಿ ಅವರ ಹಾಗೂ ಯಕ್ಷಗಾನದ ಅಭಿಮಾನಿಗಳಲ್ಲಿ ಶೋಕ ತಂದಿದೆ .
1996 ರಲ್ಲಿ ತಮ್ಮ 20ನೇ
ವಯಸ್ಸಿನಲ್ಲೇ ಕಟೀಲು ಮೇಳ ಸೇರಿ, ಮುಂದೆ ಕಟೀಲು ಎರಡನೇ ಮೇಳದ ಪ್ರಧಾನ ಭಾಗವತರಾದರು. ಶ್ರೀದೇವಿ ಮಹಾತ್ಮೆ, ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ, ಲಲಿತೋಪಖ್ಯಾನ ಸಹಿತ ಹೆಚ್ಚಿನ ಎಲ್ಲಾ ಪೌರಾಣಿಕ ಪ್ರಸಂಗಗಳಲ್ಲಿ, ತಮ್ಮ ತಂದೆಯವರಂತೆಯೇ ಹಿಡಿತ ಸಾಧಿಸಿ ಕಂಠಪಾಟದಿಂದಲೇ ಭಾಗವತಿಕೆ ಮಾಡುವ ಕೌಶಲ್ಯ ಸಾಧಿಸಿದ್ದರು. ಶೃಂಗಾರ, ಕರುಣ, ವೀರ, ಶಾಂತ ರಸಗಳ ಬಳಕೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಪ್ರಸಂಗಗಳ ಯಶಸ್ಸಿಗೆ ಕಾರಣರಾಗಿದ್ದರು.
ಪೌರಾಣಿಕ ಕಥೆ, ಪ್ರಸಂಗದ ನಡೆ, ರಂಗ ಪ್ರಯೋಗಗಳ ಬಗ್ಗೆ ಅಪಾರ ಜ್ಞಾನ ಹೊಂದಿ, ಸಹ ಕಲಾವಿದರ ಮೆಚ್ಚುಗೆಗೆ ಪಾತ್ರರಾಗಿದ್ದರು. ಸರಳ, ಸಜ್ಜನಿಕೆಯ ವ್ಯಕ್ತಿತ್ವದ ಪ್ರಸಾದರು ಅಜಾತ ಶತ್ರು ಎಂದೇ ಗುರುತಿಸಿಕೊಂಡಿದ್ದರು.














