ಮಂಗಳೂರು : ಮಂಗಳೂರು ಹೊರವಲಯದ ಮೂಡುಶೆಡ್ಡೆಯಲ್ಲಿ ಮೂಡುಬಿದಿರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕಾರಿನ ಮೇಲೆ ಕಲ್ಲು ತೂರಾಟ ನಡೆದಿದೆ. ಸ್ಥಳದಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದು, ಉದ್ವಿಗ್ನ ಸ್ಥಿತಿ ಉಂಟಾಗಿದೆ.
ಸಂಜೆ ಹೊತ್ತಿಗೆ ಮೂಡುಶೆಡ್ಡೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿದ್ದರು. ಆ ವೇಳೆ ಮಿಥುನ್ ರೈ ಬೆಂಬಲಿಗರಿದ್ದ ಕಾರು ಆ ದಾರಿಯಲ್ಲಿ ಬರುವಾಗ, ಬಿಜೆಪಿಯವರು ಮೋದಿ ಮೋದಿ ಘೋಷಣೆ ಕೂಗಿದ್ದಾರೆ. ಮಿಥುನ್ ರೈ ಮತ್ತು ಬೆಂಬಲಿಗರು ಕಾರು ನಿಲ್ಲಿಸಿ, ಕಾಂಗ್ರೆಸ್ ಜೈ
ಎಂದು ಘೋಷಣೆ ಕೂಗಿದ್ದಾರೆ.
ಆಗ ಎರಡೂ ತಂಡಗಳ ಜೈಕಾರದ ನಡುವೆ ಮಿಥುನ್ ರೈ ಕಾರಿಗೆ ಕಲ್ಲು ತೂರಾಟ ಆಗಿದೆ. ಇಬ್ಬರು ಕಾರ್ಯಕರ್ತರಿಗೆ ಸಣ್ಣ ಮಟ್ಟಿಗೆ ಗಾಯವಾಗಿದೆ. ಅಷ್ಟರಲ್ಲಿ ಪೋಲಿಸ್ ಬಂದು ಗುಂಪನ್ನು ಚದುರಿಸಿದ್ದಾರೆ. ಸ್ಥಳದಲ್ಲಿ ಹೆಚ್ಚುವರಿ ಪೋಲಿಸ್ ನಿಯೋಜನೆ ಮಾಡಲಾಗಿದೆ.















