ಬಂಟ್ವಾಳ: ಇಲ್ಲಿನ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಸಮೀಪದಲ್ಲೇ ಪಾಳುಬಿದ್ದ ವಿಶಾಲವಾದ ಕಲ್ಕುಟ ಕೆರೆಯೊಂದನ್ನುಕರಿಯಂಗಳ ಗ್ರಾಮ ಪಂಚಾಯಿತಿ ವತಿಯಿಂದ ಕಳೆದ ಒಂದು ವರ್ಷಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತಿತರ ವಿವಿಧ ಸಂಪನ್ಮೂಲ ಬಳಸಿ ಪುನಶ್ಚೇತನಗೊಳಿಸುವ ಮೂಲಕ ಹೊಸ ಕಾಯಕಲ್ಪ ನೀಡಲು ಮುಂದಾಗಿದೆ.
ಇಲ್ಲಿನ ಪುಂಚಮೆಯಿಂದ ಪೊಳಲಿ ದೇವಳ ರಸ್ತೆ ನಡುವೆ ಸುಮಾರು 5 ಎಕರೆ ವಿಶಾಲವಾದ ಸಕರ್ಾರಿ ಜಮೀನಿನ ತಗ್ಗು ಪ್ರದೇಶದಲ್ಲಿ ಮಳೆ ನೀರು ಸಂಗ್ರಹಿಸಿ, ಪ್ರವಾಸೋದ್ಯಮ ಇಲಾಖೆಯಡಿ ಪುನಶ್ಚೇತನಗೊಳಿಸಿ ಹೊಸ ರೂಪ ನೀಡಲು ಮುಂದಾಗಿದೆ. ಈಗಾಗಲೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ರೂ 10 ಲಕ್ಷ ವೆಚ್ಚದಲ್ಲಿ ಸುಮಾರು 5 ಅಡಿ ತುಂಬಿದ್ದ ಹೂಳು ಮೇಲೆತ್ತಿ ಶುಚಿಗೊಳಿಸಿ ನೀರು ಸಂಗ್ರಹಗೊಂಡಿದೆ. ಇನ್ನೊಂದೆಡೆ ಎಂ ಆರ್ ಪಿ ಎಲ್ ಸಂಸ್ಥೆ ಸಿ ಎಸ್ ಆರ್ ಯೋಜನೆಯಡಿ ರೂ 6.65ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಶೌಚಾಲಯ ನಿರ್ಮಾಣಗೊಳ್ಳುತ್ತಿದೆ.
ಈ ಕರೆಯ ಸುತ್ತಲೂ ಕಲ್ಲು ಹಾಸಿ, ವಾಕಿಂಗ್ ಟ್ರ್ಯಾಕ್ ನಿರ್ಮಿಸಲಾಗುತ್ತಿದೆ. ಈಗಾಗಲೇ ರೂ 39 ಲಕ್ಷ ಉದ್ಯೋಗ ಖಾತರಿ ಯೋಜನೆಯಡಿ ಅನುದಾನ ವಿನಿಯೋಗಗೊಂಡಿದೆ. ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಇಲಾಖೆ
ರೂ 50 ಲಕ್ಷ ಅನುದಾನ ನೀಡುವಂತೆ ಬೇಡಿಕೆ ಸಲ್ಲಿಸಲಾಗಿದ್ದು, ಬೋಟಿಂಗ್ ಸಹಿತ ಸುತ್ತಲೂ ಹಸುರೀಕರಣಗೊಳಿಸಲು ನಕಾಶೆ ಸಿದ್ಧಪಡಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ ತಿಳಿಸಿದ್ದಾರೆ. ಕರಿಯಂಗಳ ಗ್ರಾಮ ಪಂಚಾಯಿತಿ ಜೊತೆಗೆ ಪೊಳಲಿ ಶ್ರೀ ರಾಮಕೃಷ್ಣ ತಪೋವನ, ರಾಷ್ಟ್ರೀಕೃತ ಬ್ಯಾಂಕಿನ ಸಿ ಎಸ್ ಆರ್ ಅನುದಾನ ನೀಡಲು ಮನವಿ ಸಲ್ಲಿಸಲಾಗಿದೆ.
ಈ ಕರೆ ಬದಿಯಲ್ಲೇ ಹಾದು ಹೋಗಿರುವ ಸುಮಾರು ಒಂದು ಕಿ.ಮೀ. ರಸ್ತೆ ಯಲ್ಲಿ ಸಂಚರಿಸುತ್ತಿರುವ ಪೊಳಲಿ ಕ್ಷೇತ್ರದ ಭಕ್ತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಪ್ರಕೃತಿ ರಮಣೀಯ ಪ್ರದೇಶದಲ್ಲಿ ಈ ವಿಶಾಲವಾದ ಕೆರೆ ಅಭಿವೃದ್ಧಿಗೊಂಡಾಗ ಕೃಷಿಕರಿಗೂ ಅನುಕೂಲಕರವಾಗಲಿದೆ. ಇದೇ ಮಾದರಿಯಲ್ಲಿ ಇತರ ಗ್ರಾಮ ಪಂಚಾಯಿತಿಗಳೂ ಕಾರ್ಯನಿರ್ವಹಿಸಿದಾಗ ಅಲ್ಲಿನ ಪಾಳುಬಿದ್ದ ಸರ್ಕಾರಿ ಜಮೀನು ಅತಿಕ್ರಮಣಕ್ಕೂ ಕಡಿವಾಣ ಬೀಳಲಿದೆ ಎನ್ನುತ್ತಾರೆ ಸ್ಥಳೀಯರು.









