ಸುಜೀರು :ಜ.5-14, ಶ್ರೀರಾಮ ವೈದ್ಯನಾಥ ಭಜನಾ ಮಂದಿರದ ಅಮೃತ ಮಹೋತ್ಸವ ಸಮಾರಂಭ . ಜ.12 ರಂದು ಲೋಕ ಕಲ್ಯಾಣಾರ್ಥವಾಗಿ ಶತರುದ್ರಯಾಗ. ಜ.13ರಂದು 75ನೇ ವಾರ್ಷಿಕ ಏಕಾಹ ಭಜನಾ ಮಹೋತ್ಸವ.ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ.

Coastal Bulletin
ಸುಜೀರು :ಜ.5-14, ಶ್ರೀರಾಮ ವೈದ್ಯನಾಥ ಭಜನಾ ಮಂದಿರದ ಅಮೃತ ಮಹೋತ್ಸವ ಸಮಾರಂಭ . ಜ.12 ರಂದು ಲೋಕ ಕಲ್ಯಾಣಾರ್ಥವಾಗಿ ಶತರುದ್ರಯಾಗ. ಜ.13ರಂದು 75ನೇ ವಾರ್ಷಿಕ ಏಕಾಹ ಭಜನಾ ಮಹೋತ್ಸವ.ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ.

ಬಂಟ್ವಾಳ: ತಾಲೂಕಿನ ಪುದು ಗ್ರಾಮದ ಸುಜೀರು ಎಂಬಲ್ಲಿ ಶ್ರೀ ಅರಸು ವೈದ್ಯನಾಥ ಜುಮಾದಿ ಬಂಟ ಹಾಗೂ ಪರಿವಾರ ದೈವಗಳು ಅನಾದಿ ಕಾಲದಿಂದ ನೆಲೆನಿಂತ ಪುಣ್ಯ ಭೂಮಿಯಲ್ಲಿ 6 ಗ್ರಾಮಗಳ ಜನರ ಶ್ರದ್ಧಾ ಭಕ್ತಿಯ ಕೂಡುವಿಕೆಯಲ್ಲಿ, ಶ್ರೀರಾಮ ವೈದ್ಯನಾಥ ಭಜನಾ ಮಂದಿರ ಸುಜೀರು ಇದರ 75ನೇ ವರ್ಷದ ಏಕಾಹ ಭಜನಾ ಮಹೋತ್ಸವದ ಸುಸಂದರ್ಭದಲ್ಲಿ ಲೋಕ ಕಲ್ಯಾಣಾರ್ಥವಾಗಿ ನವಗ್ರಹ ಸಹಿತ ಶತ ರುದ್ರಯಾಗವು ಜ.12 ರಂದು ಭಾನುವಾರ ಸುಜೀರು ಶ್ರೀಆರಸು ವೈದ್ಯನಾಥ ಧೂಮಾವತಿ ಬಂಟ ಪರಿವಾರ ದೈವಗಳ ಕ್ಷೇತ್ರದ ಸಾನಿಧ್ಯದಲ್ಲಿ ನಡೆಯಲಿದೆ ಎಂದು ಅಮೃತಮಹೋತ್ಸವ ಸಮಿತಿಯ ಪ್ರಧಾನ ಸಂಚಾಲಕ ತಾರಾನಾಥ ಕೊಟ್ಟಾರಿ ತೇವು ಅವರು ತಿಳಿಸಿದ್ದಾರೆ.

ಜ. 8ರಂದು ಬುಧವಾರ ಸುಜೀರು ಶ್ರೀ ವೈದ್ಯನಾಥ ಕೇತ್ರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಎಂಟು ವರ್ಷಗಳ ಹಿಂದೆ ಕ್ಷೇತ್ರದ ದೈವಗಳು ನೀಡಿರುವ ಅಭಯದಂತೆ,ಇಲ್ಲಿಗೆ ಸಂಬಂಧಪಟ್ಟ ಸುತ್ತಮುತ್ತಲಿನ 6 ಗ್ರಾಮಗಳನ್ನು ಜೋಡಿಸಿಕೊಂಡು ಜನರ ಸಕಲ ಇಷ್ಟಾರ್ಥ ಸಿದ್ದಿಗಾಗಿ ಈ ಯಾಗವನ್ನು ನಡೆಸಲಾಗುತ್ತಿದೆ ಎಂದರು.


ವಿಶೇಷವಾಗಿ ಅವೆ ಮಣ್ಣಿನಲ್ಲೇ ಸಿದ್ದಪಡಿಸಲಾದ ಯಾಗಕುಂಡದಲ್ಲಿ ವೃಷಭಾಯ ಮಂಟಪದಲ್ಲಿ ಕ್ಷೇತ್ರದ ಪುರೋಹಿತರಾದ ಏರ್ಯ ರಘರಾಮ ಮಯ್ಯ ಅವರ ಪೌರೋಹಿತ್ಯದಲ್ಲಿ ಬೆಳಿಗ್ಗೆ 8.30 ಯಾಗ ಆರಂಭಗೊಳ್ಳಲಿದ್ದು ಸುಮಾರು ಎರಡೂವರೆ ತಾಸುಗಳ ಕಾಲ ಯಾಗ ನಡೆಯಲಿದೆ. ಮಧ್ಯಾಹ್ನ ಪೂರ್ಣಾಹುತಿಯಾಗಿ ಶ್ರೀರಾಮ ದೇವರಿಗೆ ಮಹಾಪೂಜೆ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.ಮಧ್ಯಾಹ್ನದ ನಂತರ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ಅಮೃತಮಹೋತ್ಸವದ ಪ್ರಯುಕ್ತ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕುಂಟಾರು ರವೀಶ್ ಶಂತ್ರಿಯವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.ಸುಜೀರುಗುತ್ತು ಯಜಮಾನರಾದ ರಾಮಕೃಷ್ಣ ಚೌಟ ಅವರು ಸಭಾಧ್ಯಕ್ಷತೆ ವಹಿಸಲಿದ್ದು ಅನೇಕ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

75ನೇ ವರುಷದ ಏಕಾಹ ಭಜನೆ:

ಜ.13 ರಂದು ಬೆಳಗ್ಗೆ ಸೂರ್ಯೋದಯ 6.56 ಕ್ಕೆ 75 ನೇ ವರ್ಷದ ಏಕಾಹ ಭಜನೆಗೆ ಚಾಲನೆ ನೀಡಲಾಗುವುದು ಜ. 14 ರಂದು ಬೆಳಿಗ್ಗೆ 6.56. ಭಜನಾ ಮಂಗಳಾಚರಣೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ಅವರು ತಿಳಿಸಿದರು.

 ಕ್ಷೇತ್ರ ಪುರಾಣ :

ಬಂಟ್ವಾಳ ತಾಲೂಕಿನ ಪುದು ಗ್ರಾಮದ ಸುಜೀರುವಿನಲ್ಲಿ ಶ್ರೀ ಅರಸು ವೈದ್ಯನಾಥ ಜುಮಾದಿ బంట ಹಾಗೂ ಪರಿವಾರ ದೈವಗಳು ಅನಾದಿ ಕಾಲದಿಂದ ನೆಲೆಯಾದ ಪುಣ್ಯ ಸ್ಥಳವಾಗಿದೆ. ಈ ದೈವಸ್ಥಾನದ ಆಡಳಿತ ಸುಜೀರುಗುತ್ತು ಮನೆತನದವರಿಗೆ ಒಳಪಟ್ಟಿದ್ದು, ಇದಕ್ಕೆ ಸಂಬಂಧಿಸಿದಂತೆ 8 ಸತ್ ಗುತ್ತುಗಳಿವೆ. ಎರಡು ದೈವಗಳ ಜಳಕದ ಕೆರೆ,

6 ಆಶ್ವಥದಕಟ್ಟೆ, ಒಂದು ದೈವದ ಪಾಪ ಬಂಡಿ ಇದೆ,ವೈದ್ಯನಾಥನ ಸೇವೆಯನ್ನು ದೇಯಿಬೈದೆದಿ ಕುಟುಂಬಸ್ಥರು ನಡೆಸುವುದು ಇಲ್ಲಿ ಸಂಪ್ರದಾಯವಾಗಿದ್ದು, ಮಾರ್ಚ್ ತಿಂಗಳಲ್ಲಿ 5 ದಿನಗಳ ಸುಜೀರಾಯನ ಜಾತ್ರೆ ನಡೆಯುತ್ತದೆ ಎಂದ ಅವರು ಈ ದೈವಸ್ಥಾನದ ಭಂಡಾರದ ಮನೆಯಲ್ಲಿ 75 ವರ್ಷದ ಹಿಂದೆ ಹಿರಿಯರು ಸೇರಿಕೊಂಡು ದೇವರ ನಾಮಸ್ಥರಣೆ ಮಾಡುತ್ತಾ ದೈವದ ಸೇವೆಯನ್ನು ಮಾಡತೊಡಗಿದ್ದು,ಕಾಲಕ್ರಮೇಣ ಶ್ರೀರಾಮ ವೈದ್ಯನಾಥ ಭಜನಾ ಮಂದಿರವನ್ನು ನಿರ್ಮಿಸಿದರು. ನಂತರ ಹಳೆಯ ಭಜನಾ ಮಂದಿರವನ್ನು ಕೆಡವಿ ನೂತನ ಭವ್ಯವಾದ ಮಂದಿರವನ್ನು ನಿರ್ಮಿಸಲಾಯಿತು ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಭಜನಾ ಮಂದಿರ ಸಮಿತಿಯ ಗೌರವಾಧ್ಯಕ್ಷ ರವೀಂದ್ರಕಂಬಳಿ ಸುಜೀರು ಗುತ್ತು ತಿಳಿಸಿದರು. 


ಈ ಭಜನಾ ಮಂದಿರದಲ್ಲಿ ಪ್ರತಿ ಶನಿವಾರದ ವಾರದ ಪೂಜೆ, ರಾಮನವಮಿಯ ಪ್ರಯುಕ್ತ ಸತ್ಯನಾರಾಯಣ ಪೂಜೆ ಹಾಗೂ ಭಜನೆ, ಅಷ್ಟಮಿಯ ಭಜನೆ, ನವರಾತ್ರಿಯ 9 ದಿವಸದ ಭಜನೆ, ದೀಪಾವಳಿಯ ಭಜನೆ, ನಗರ ಭಜನೆ ಹಾಗೂ ಸುಜೀರಾಯನದ ಸಂದರ್ಭದಲ್ಲಿ 5 ದಿವಸದ ಭಜನೆ, ದೈವದ ನೇಮದಲ್ಲಿ ನಿರಂತರ ಭಜನೆ ನಡೆದುಕೊಂಡು ಬರುತ್ತಿದೆ. ಧರ್ಮಮಾಸದ ಹುಣ್ಣಿಮೆಯ ಸೂರ್ಯೋದಯದಂದು ಏಕಹಾ ಭಜನೆ ಪ್ರಾರಂಭವಾಗಿ ಮರುದಿವಸ ಸೂರ್ಯೋದಯಕ್ಕೆ ಮಂಗಳ ಆಚರಣೆಯ ಮೂಲಕ ಏಕಾಹ ಭಜನೆಯು ಸಂಪನ್ನಗೊಳ್ಳುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಐತಪ್ಪ ಆಳ್ವ ಸುಜೀರುಗುತ್ತು, ಗೌರವ ಅಧ್ಯಕ್ಷ ಪ್ರಕಾಶ್ಚಂದ್ರ ರೈ ದೇವಸ್ಯ ,ಭಜನಾ ಮಂದಿರ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಗಾಂಭೀರ ಸುಜೀರುಗುತ್ತು,ಅಮೃತ ಮಹೋತ್ಸವ ಸಮಿತಿಯ ಪ್ರ. ಕಾರ್ಯದರ್ಶಿ ಪ್ರವೀಣ್ ಕುಮಾರ್ ಶೆಟ್ಟಿ ಸುಜೀರು, ಗೌರವ ಸಲಹೆಗಾರ ಬಾಲಕೃಷ್ಣ ಗಾಂಭೀರ ಸುಜೀರುಗುತ್ತು, ಭಜನಾ ಸಮಿತಿಯ ಪ್ರ.ಕಾರ್ಯದರ್ಶಿ ಲತೇಶ್ ಸುಜೀರ್, ಮಹೇಶ್ ಕೊಡಂಗೆ, ಕಿಶೋರ್ ಬದಿಗುಡ್ಡೆ ಉಪಸ್ಥಿತರಿದ್ದರು.

Leave a Comment