ಬಂಟ್ವಾಳ :ವಿಕಾಸಂ ಸೇವಾ ಫೌಂಡೇಶನ್ ಸಂಸ್ಥೆಯು ಮೊದಲ ಬಾರಿಗೆ ವಿಕಾಸಂ ದಿನಾಚರಣೆಯನ್ನು ಹಮ್ಮಿಕೊಂಡಿದೆ. ಈ ಸಂದರ್ಭದಲ್ಲಿ ಹೆಚ್ ಪಿ ಇಂಡಿಯಾ ಸಂಸ್ಥೆಯ ವತಿಯಿಂದ ವಿಕಾಸಂ ಸೇವಾ ಫೌಂಡೇಶನ್ ನ ದಿವ್ಯಾಂಗ ಮಕ್ಕಳಿಗಾಗಿ ಕಲಿಕಾ ಸಾಧನಗಳ ವಿತರಣೆ ಹಾಗೂ ವಿಕಾಸಂ ನಲ್ಲಿ ತರಬೇತಿಯನ್ನು ಪಡೆಯುತ್ತಿರುವ ದಿವ್ಯಾಂಗ ಮಕ್ಕಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಜ. 10ರಂದು ಶನಿವಾರ ಲಯನ್ಸ್ ಸೇವಾ ಮಂದಿರ ಬಿ ಸಿ ರೋಡ್ ನಲ್ಲಿ ನಡೆಯಲಿದೆ.
ವಿಕಾಸಂ ದಿನಾಚರಣೆಯನ್ನು ಸಹಕಾರೀ ರತ್ನ ಟಿ ಜಿ ರಾಜಾರಾಮ್ ಭಟ್, ಅಧ್ಯಕ್ಷರು, ಅಮ್ಮೆಂಬಳ ಸೇವಾ ಸಹಕಾರೀ ಸಂಘ, ಮುಡಿಪು ಇವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹೆಚ್ ಪಿ ಇಂಡಿಯಾದ ಟ್ಯಾಲೆಂಟ್ ಅಕ್ವಿಸಿಷನ್ ಮುಖ್ಯಸ್ಥರಾದ ದಿಲೀಪ್ ಚಂದ್ರ ಇವರು ಭಾಗವಹಿಸಲಿದ್ದಾರೆ. ರೇಖಾ ಸಂಜೀವ, ಹೆಚ್ ಆರ್ ಮ್ಯಾನೇಜರ್, ಹೋಟೆಲ್ ವಿವಾಂತ, ಮಂಗಳೂರು, ರೋಷನ್ ರೈ , ಮ್ಯಾನೇಜಿಂಗ್ ಪಾರ್ಟ್ನರ್, ಪಂಚಮ್ ಮೋಟಾರ್ಸ್, ಬಿ ಸಿ ರೋಡ್ ಇವರೂ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಕಾಸಂ ಸಂಸ್ಥೆಯ ಸಹ ಸಂಸ್ಥಾಪಕರಾದ ಎ ಧರ್ಮಪ್ರಸಾದ್ ರೈ ಅವರು ವಹಿಸಲಿದ್ದಾರೆ.
ಉದ್ಯೋಗಾಸಕ್ತ ವಿದ್ಯಾರ್ಥಿಗಳಿಗಾಗಿ ದಿಲೀಪ್ ಚಂದ್ರ ಅವರ ನೇತೃತ್ವದ ಹೆಚ್ ಪಿ ಇಂಡಿಯಾ ಸಂಸ್ಥೆಯ ತಂಡದ ವತಿಯಿಂದ ಇಂಟರ್ವ್ಯೂ ಸ್ಕಿಲ್ಸ್ ಅಂಡ್ ರೆಸುಮ್ ಬಿಲ್ಡಿಂಗ್ " ಎನ್ನುವ ವಿಷಯದ ಮೇಲೆ ಕಾರ್ಯಾಗಾರವು ಜರಗಲಿದೆ ಎಂದು ವಿಕಾಸಂ ಸಂಸ್ಥೆಯ ಸಹ ಸಂಸ್ಥಾಪಕ ಗೋಪಾಲ್ ಕುಲಾಲ್
ಗೋವಿಂತೋಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಕಾಸಂ ಸೇವಾ ಫೌಂಡೇಶನ್ನ ದ್ಯೇಯೋದ್ದೇಶ:
ವಿಕಾಸಂ ಸೇವಾ ಫೌಂಡೇಶನ್ ಸಂಸ್ಥೆಯು 2023ರ ಅಕ್ಟೋಬರ್ 10ರಂದು ನೋಂದಾವಣೆಗೊಂಡು 2023 ನವೆಂಬರ್ 12ರಂದು ಬಂಟ್ವಾಳ ತಾಲೂಕಿನ ಬಿ ಸಿ ರೋಡಿನಲ್ಲಿ ದಿವ್ಯಾಂಗ ಸೇವಾ ಚಟುವಟಿಕೆಗಳನ್ನು ಆರಂಭಿಸಿತು. ಮಕ್ಕಳಲ್ಲಿರಬಹುದಾದ ವೈಕಲ್ಯವನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚುವುದು, ಪತ್ತೆಹಚ್ಚಲ್ಪಟ್ಟ ಮಕ್ಕಳಿಗೆ ಸೂಕ್ತ ತರಬೇತಿಯನ್ನು ಒದಗಿಸುವುದು ಮತ್ತು ಅವರನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಸುವುದು, ಹೀಗೆ ಮೂರು ಹಂತಗಳಲ್ಲಿ ಸಂಸ್ಥೆಯು ಕೆಲಸವನ್ನು ಮಾಡುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಸಂಸ್ಥೆಯು 200 ಕ್ಕೂ ಹೆಚ್ಚು ದಿವ್ಯಾಂಗ ಮಕ್ಕಳನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಪ್ರಸ್ತುತ ವಿಕಾಸಂ ಸಂಸ್ಥೆಯಲ್ಲಿ ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್( ಸ್ವಲೀನತೆAutism Spectrum Disorder), ADHD( ಅತಿಚಟುವಟಿಕೆ) , ಕಲಿಕಾ ನ್ಯೂನತೆ ಮೊದಲಾದ ಬೌದ್ಧಿಕನ್ಯೂನತೆಯುಳ್ಳ 18 ಮಂದಿ ಮಕ್ಕಳು ತರಬೇತಿ ಹಾಗೂ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಸಂಸ್ಥೆಯಲ್ಲಿ 5 ಮಂದಿ ತಜ್ಞರ ತಂಡವು ದಿವ್ಯಾಂಗ ಮಕ್ಕಳಿಗೆ ಸೇವೆಯನ್ನು ಸಲ್ಲಿಸುತ್ತಿದೆ.











