ಬಂಟ್ವಾಳ :ಸಮಾಜದ ಕಟ್ಟಕಡೆಯ ವ್ಯಕ್ತಿ ಉನ್ನತ ಸ್ಥಾನಕ್ಕೇರಲು ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ಮಾತ್ರ ಸಾಧ್ಯ. ಆಗ ಮಾತ್ರ ದೇಶ ನಿಜವಾದ ಅಭಿವೃದ್ಧಿ ಕಾಣುತ್ತದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ತಿಳಿಸಿದರು.ಅವರು ಕಳ್ಳಿಗೆ ಗ್ರಾಮದ ನೆತ್ತರಕೆರೆ ಶಾಲೆಯಲ್ಲಿ ಗುರುವಾರ ವಸಂತಿ ವಿಠಲ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳೆಂದರೆ ಜನರಿಗೆ ತೀರ ಅಸಡ್ಡೆಯಾಗಿರುವ ಸಂದರ್ಭದಲ್ಲಿ ಶಾಲೆಯನ್ನು ದತ್ತು ಸ್ವೀಕರಿಸಿ ದಾನಿಗಳ ಸಹಕಾರದಿಂದ ಅಭಿವೃದ್ಧಿ ಪಡಿಸಿ ಉತ್ಕೃಷ್ಟ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವುದು ಶ್ಲಾಘನೀಯ. ಇದರಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಇಡೀ ರಾಜ್ಯದಲ್ಲಿ
ಅತ್ಯಂತ ಹೆಚ್ಚು 1300 ಮಕ್ಕಳು ವಿದ್ಯಾಭ್ಯಾಸ ಕಲಿಯುತ್ತಿರುವ ಶಾಲೆ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿದೆ. ದಡ್ಡಲಕಾಡು ಶಾಲೆಯಲ್ಲೂ 800 ವಿದ್ಯಾರ್ಥಿಗಳಿದ್ದಾರೆ. ನೆತ್ತರಕೆರೆ ಶಾಲೆಯಲ್ಲೂ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಮೂವರು ಹೆಚ್ಚುವರಿ ಶಿಕ್ಷಕರನ್ನು ಕರ್ತವ್ಯಕ್ಕೆ ನಿಯೋಜಿಸಲು ಸೂಚಿಸಲಾಗುವುದು ಎಂದರು.















