ಬಂಟ್ವಾಳ : ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಮತ್ತು ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡ ಭಕ್ತರಿಗೆ ಶಿವ ನೆಲೆಸಿದ ಕೈಲಾಸದಂತೆ ಮಾನಸಿಕ ನೆಮ್ಮದಿ ಮತ್ತು ಪುಣ್ಯಪ್ರಾಪ್ತಿಯಾಗಲಿದೆ ಎಂದು ರಾಮಚಂದ್ರಾಪುರ ಮಠ ರಾಘವೇಶ್ವರ ಭಾರತಿ ಸ್ಚಾಮೀಜಿ ಹೇಳಿದ್ದಾರೆ.
ಇಲ್ಲಿನ ಕರೋಪಾಡಿ ಗ್ರಾಮದ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಸೋಮವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಇದೇ ವೇಳೆ ಕ್ಷೇತ್ರದ ತಂತ್ರಿ ಕುಂಟುಕುಡೇಲು ರಘುರಾಮ ತಂತ್ರಿ ಮಾರ್ಗದರ್ಶನದಲ್ಲಿ ಶತರುದ್ರ ಸಹಿತ ಬ್ರಹ್ಮಕುಂಭಾಭಿಷೇಕ, ಮಹಾಬಲಿ ಪೀಠ ಪ್ರತಿಷ್ಠೆ ಹಾಗೂ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ನೆರವೇರಿತು.
ಗೌರಿಗದ್ದೆ ಅವಧೂತ ವಿನಯ ಗುರೂಜಿ ಆಶೀರ್ವಚನ ನೀಡಿ, ' ಒಂದು ಮಠ ಗಟ್ಟಿಯಾಗಿದ್ದರೆ ಅಲ್ಲಿನ ಊರು ಉಳಿಯುತ್ತದೆ. ನಾನು ಎಂಬ ಅಹಂಕಾರ ಕಳೆದುಕೊಳ್ಳುವುದೇ ಸನ್ಯಾಸ. ಜಗತ್ತಿನ ಶಂಕೆ ನಿವಾರಿಸಲು ಶಂಕರಾಚಾರ್ಯರು ಜನಿಸಿದ್ದು, ಎಲ್ಲಾ ದೇವಾಲಗಳಲ್ಲಿ ಸರಳ ಮತ್ತು ಸಾಮೂಹಿಕ ವಿವಾಹ ನಡೆಸಬೇಕು' ಎಂದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಕೈರಂಗಳ ಶ್ರೀ ಶಾರದಾಗಣಪತಿ ವಿದ್ಯಾಕೇಂದ್ರ ಅಧ್ಯಕ್ಷ ಟಿ.ಜಿ.ರಾಜಾರಾಮ ಭಟ್, ಶ್ರೀ ಷಣ್ಮುಖ ಸುಬ್ರಹ್ಮಣ್ಯ
ದೇವಸ್ಥಾನ ಆಡಳಿತ ಮೊಕ್ತೇಸರ ಮುಳ್ಳುಂಜ ವೆಂಕಟೇಶ್ವರ ಭಟ್, ಸ್ವರ್ಣೋಧ್ಯಮಿ ಕೇಶವ ಪ್ರಸಾದ್ ಮುಳಿಯ, ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಹಿರಿಯ ವಕೀಲ ಎಸ್.ಎಂ.ಭಟ್, ಉದ್ಯಮಿ ಕೃಷ್ಣರಾಜ್ ಉಪ್ಪಿನಂಗಡಿ, ಪ್ರಮುಖರಾದ ಗೋಪಾಲಕೃಷ್ಣ ಭಟ್, ಉಜ್ವಲ್ ಪ್ರಭು ಶುಭ ಹಾರೈಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಅರುಣ್ ಶ್ಯಾಮ್, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಅರವಿಂದ ಪದ್ಯಾಣ, ಆಡಳಿತ ಮೊಕ್ತೇಸರ ಸೇರಾಜೆ ಸತ್ಯನಾರಾಯಣ ಭಟ್, ಸಮಿತಿ ಗೌರವಾಧ್ಯಕ್ಷ ಪದ್ಯಾಣ ತಿಮ್ಮಣ್ಣ ಭಟ್ಟ ಅಭಿರಾಮ, ಪದ್ಯಾಣ ರಘುರಾಮ ಕಾರಂತ, ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಅನೆಯಾಲಗುತ್ತು, ಕಾರ್ಯದರ್ಶಿ ಕೃಷ್ಣ ಎಂ.ಆರ್. ಕಡಬ, ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ಈಶಾನ್ಯ ಪದ್ಯಾಣ ಇದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಟಿ.ಶ್ಯಾಮ ಭಟ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಡಾ.ಪ್ರವೀಣ ಪದ್ಯಾಣ ವಂದಿಸಿದರು.
ಸಮಿತಿ ಕಾರ್ಯಧ್ಯಕ್ಷ ಶ್ಯಾಮ ಸುದರ್ಶನ ಹೊಸಮೂಲೆ ಮತ್ತು ನವ್ಯಕೃಷ್ಣ ಮಾಣಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.















