ಬಂಟ್ವಾಳ: ಕಳೆದ ಎರಡೂವರೆ ವರ್ಷಗಳಿಂದ ವಿವಿಧ ನೆಪವೊಡ್ಡಿ ಮುಂದೂಡಲಾಗಿದ್ದ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಿದ್ಧತೆ ಆರಂಭಗೊಂಡಿದ್ದು, ಕ್ಷೇತ್ರ ಪುನರ್ ವಿಂಗಡಣೆ ಪಟ್ಟಿ ಕೊನೆಗೂ ಪ್ರಕಟಗೊಂಡಿದೆ.
ಜಿಲ್ಲೆಯಲ್ಲೇ ಅತೀ ಹೆಚ್ಚು ಸ್ಥಾನ ಹೊಂದಿರುವ ತಾಲ್ಲೂಕು ಪಂಚಾಯಿತಿ (25) ಮತ್ತು ಜಿಲ್ಲಾ ಪಂಚಾಯಿತಿ (8) ಕ್ಷೇತ್ರವಾಗಿ ವಿಂಗಡಣೆಗೊಂಡಿದೆ.
ಕಳೆದ 2016 ರಲ್ಲಿ ನಡೆದ ಚುನಾವಣೆಯಲ್ಲಿ 34 ಸ್ಥಾನ ಹೊಂದಿದ್ದ ಜಿಲ್ಲಾ ಪಂಚಾಯಿತಿ 9 ಸ್ಥಾನ ಹೊಂದಿತ್ತು. ಇದೀಗ ಕ್ಷೇತ್ರ ವಿಂಗಡಣೆ ಬಳಿಕ ತಾಲ್ಲೂಕು ಪಂಚಾಯಿತಿ 34 ಸ್ಥಾನದಿಂದ 25ಕ್ಕೆ ಇಳಿದಿದೆ. ಜಿಲ್ಲೆಯಲ್ಲೇ ಅತೀ ಹೆಚ್ಚು 9 ಸ್ಥಾನ ಹೊಂದಿದ್ದ ಜಿಲ್ಲಾ ಪಂಚಾಯಿತಿ 1 ಸ್ಥಾನ ಕಳೆದುಕೊಂಡು 8 ಕ್ಕೆ ಸೀಮಿತಗೊಂಡಿದೆ.
ಇಲ್ಲಿನ ಸಂಗಬೆಟ್ಟು, ಸರಪಾಡಿ, ಗೋಳ್ತಮಜಲು, ಸಜಿಪಮುನ್ನೂರು, ಮಾಣಿ, ಕೊಳ್ನಾಡು, ಪುಣಚ ಮತ್ತು ಪುದು ಜಿಲ್ಲಾ ಪಂಚಾಯಿತಿ ಕ್ಷೇತ್ರ ಅದೇ ಹೆಸರಿನಲ್ಲೇ ಮುಂದುವರಿದಿದೆ.
ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ ಇಲ್ಲಿನ ತುಂಬೆ, ಪುದು ಗ್ರಾಮಗಳನ್ನು ಉಳ್ಳಾಲ ತಾಲ್ಲೂಕಿನಿಂದ ಕೈಬಿಟ್ಟು ಬಂಟ್ವಾಳ ತಾಲ್ಲೂಕಿನಲ್ಲೇ ಉಳಿದಿದೆ.
ಇಲ್ಲಿನ ಅತೀ ದೊಡ್ಡ ಜಿಲ್ಲಾ ಪಂಚಾಯಿತಿ ಕ್ಷೇತ್ರವಾಗಿ ಗುರುತಿಸಿಕೊಂಡ ಪುದು ಕ್ಷೇತ್ರದಲ್ಲಿ ಈ ಎರಡು ತಾಲ್ಲೂಕು ಪಂಚಾಯಿತಿ ಕ್ಷೇತ್ರ ಇದೆ.
ಇಲ್ಲಿನ ಸಂಗಬೆಟ್ಟು, ಪಂಜಿಕಲ್ಲು, ಪಿಲಾತಬೆಟ್ಟು, ಮಣಿನಾಲ್ಕೂರು, ನಾವೂರು, ಕಾವಳಮುಡೂರು, ಅಮ್ಮುಂಜೆ, ಅಮ್ಟಾಡಿ, ಸಜಿಪಮುನ್ನೂರು, ಸಜಿಪಮೂಡ, ನರಿಕೊಂಬು, ಗೋಳ್ತಮಜಲು,ಬಾಳ್ತಿಲ, ಮಾಣಿ, ವೀರಕಂಬ, ವಿಟ್ಲಪಡ್ನೂರು, ಕೆದಿಲ, ಕೊಳ್ನಾಡು, ಕನ್ಯಾನ, ಮಂಚಿ, ಪುಣಚ, ಅಳಿಕೆ, ವಿಟ್ಲಮುಡ್ನೂರು, ಪುದು, ತುಂಬೆ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾಗಿ ಪುನರ್ ವಿಂಗಡಣೆಗೊಂಡಿದೆ.
ಈ ಪೈಕಿ ಪುದು ತಾಲ್ಲೂಕು ಪಂಚಾಯಿತಿ ಮಾತ್ರ ಒಂದೇ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೀಮಿತಗೊಂಡಿರುವುದು ಇಲ್ಲಿನ ವಿಶೇಷತೆ.
ಇದೀಗ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಕ್ಷೇತ್ರ ಪುನರ್ ವಿಂಗಡಣೆ ಪಟ್ಟಿ ಪ್ರಕಟಗೊಳ್ಳುತ್ತಿದ್ದಂತೆಯೇ ರಾಜಕೀಯ ಪಕ್ಷಗಳು ಲಾಭ-ನಷ್ಟಗಳ ಬಗ್ಗೆ ಲೆಕ್ಕಾಚಾರಕ್ಕೆ ತೊಡಗಿದ್ದು, ಟಿಕೆಟ್ ಆಕಾಂಕ್ಷಿಗಳಲ್ಲಿ ಹೊಸ ಆಸೆ ಚಿಗುರತೊಡಗಿರುವುದು ಕಂಡು ಬಂದಿದೆ.















