ಬಂಟ್ವಾಳ :ಭೂಮಿಯ ಉಷ್ಣಾಂಶ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು ಪ್ರಾಣಿ ಪಕ್ಷಿ ಸಂಕುಲ ಸೇರಿದಂತೆ ಮಾನವನಿಗೆ ಬದುಕುವುದು ಕಷ್ಟಕರವಾಗುತ್ತಿದೆ. ಇದನ್ನು ಪರಿಹರಿಸಲು ಮರಗಳನ್ನು ಬೆಳೆಸುವುದು ಮಾತ್ರ ಪರಿಹಾರ ಕ್ರಮವಾಗಿದೆ ಹೊರತು ಬೇರೆ ಯಾವುದೇ ಪರ್ಯಾಯವಿಲ್ಲ ಎಂದು ಕೇಂದ್ರ ಸಂವಹನ ಇಲಾಖೆಯ ಪ್ರಾಂತೀಯ ಪ್ರಚಾರಾಧಿಕಾರಿ ಜಿ.ತುಕರಾಮ್ ಹೇಳಿದರು.
ಅವರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆ ಶಂಭೂರು ಇಲ್ಲಿ ಕೇಂದ್ರ ಸಂವಹನ ಇಲಾಖೆಯ ಸಹಯೋಗದಲ್ಲಿ ಶಾಲಾ ಹಸಿರು ಪಡೆ ಚಿಗುರು ಪರಿಸರ ಸಂಘದ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಲಾವರಣದಲ್ಲಿ ಗಿಡ ನೆಟ್ಟು ವಿದ್ಯಾರ್ಥಿಗಳಿಗೆ ಗಿಡ ವಿತರಿಸಿ ಮಾತನಾಡಿದರು.
ವಿದ್ಯಾರ್ಥಿನಿ ಶ್ರೀವಾಣಿ
ವಿಶ್ವ ಪರಿಸರ ದಿನದ ಔಚಿತ್ಯವನ್ನು ತಿಳಿಸಿದಳು. ಕಾರ್ಯಕ್ರಮದಲ್ಲಿ ಕೇಂದ್ರ ಸಂವಹನ ಇಲಾಖೆಯ ಸಹಾಯಕ ಅಧಿಕಾರಿ ರೋಹಿತ್ ಶಿಕ್ಷಕರಾದ ಸುಜಾತ, ಪ್ರಕಾಶ್, ವರಮಹಾಲಕ್ಷ್ಮೀ, ದೇವದಾಸ್, ಗೀತಾ, ಕಛೇರಿ ಸಹಾಯಕರಾದ ಹರೀಶ್ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಕಮಲಾಕ್ಷ ಸ್ವಾಗತಿಸಿದರು, ಹರಿಪ್ರಸಾದ್ ವಂದಿಸಿದರು. ವಿಜ್ಞಾನ ಶಿಕ್ಷಕಿ ಭಾರತಿಹರೀಶ್ ಕಾರ್ಯಕ್ರಮ ನಿರ್ವಹಿಸಿದರು









