ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜು ಮಾಲಕರ ಸೌಹಾರ್ದ ಸಹಕಾರಿ ಸಂಘ ಅತೀ ಶೀಘ್ರದಲ್ಲಿ ಆರಂಭಗೊಳ್ಳಲಿದ್ದು ಪ್ರಸ್ತುತ ಸದಸ್ಯರಿಂದ ಪಾಲು ಬಂಡವಾಳವನ್ನು ಸಂಗ್ರಹಿಸಲಾಗುತ್ತಿದೆ. ಎಲ್ಲಾ ವಲಯಗಳಲ್ಲೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತರಾಗಿ ಪಾಲುಬಂಡವಾಳ ನೀಡುವ ಮೂಲಕ ಸಹಕಾರ ನೀಡುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜು ಮಾಲಕರ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಪ್ರವರ್ತಕ ಜನಾರ್ದನ ಸುವರ್ಣ ಹೇಳಿದರು.
ಅವರು ಬಿ.ಸಿ.ರೋಡಿನ ಆಟೋಲೈನ್ಸ್ ಗ್ಯಾರೇಜಿನ ಸಭಾಂಗಣದಲ್ಲಿ ಭಾನುವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜು ಮಾಲಕರ ಸಂಘ ಇದರ ಬಂಟ್ವಾಳ ವಲಯದ ಮಾಸಿಕ ಸಭೆಯಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜು ಮಾಲಕರ ಸೌಹಾರ್ದ ಸಹಕಾರಿ ಸಂಘದ ಬಗ್ಗೆ ಮಾಹಿತಿ ನೀಡಿದರು. ಉತ್ತಮ ಉದ್ದೇಶವನ್ನಿಟ್ಟುಕೊಂಡು ಗ್ಯಾರೇಜು ಮಾಲಕರ ಸಂಘ, ಸೌಹಾರ್ದ ಸಹಕಾರಿ ಸಂಘವನ್ನು ಸ್ಥಾಪಿಸಲು ತೀರ್ಮಾನಿಸಿದೆ. ಹಲವು ವರ್ಷದ ಈ ಪ್ರಯತ್ನ ಈಗ ಕಾರ್ಯಗತಗೊಳ್ಳುತ್ತಿದೆ. ಗ್ಯಾರೇಜು ಮಾಲಕರು ಮಾತ್ರವಲ್ಲದೆ ಗ್ಯಾರೇಜು ನೌಕರರು, ಸಾರ್ವಜನಿಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವ ಬಗ್ಗೆ ಚಿಂತನೆ ಇದೆ. ಮುಂದಿನ ಜುಲೈ ೧೫ ತಾರೀಖಿನ ಒಳಗಾಗಿ ಸಹಕಾರಿ ಸಂಘವನ್ನು ನೋಂದಾಯಿಸುವ ಪ್ರಕ್ರಿಯೆ ನಡೆಸುವುದಾಗಿ
ತಿಳಿಸಿದರು.
ಬಂಟ್ವಾಳ ವಲಯ ಸಂಘದ ಅಧ್ಯಕ್ಷ ಜಗದೀಶ್ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲಾ ಸಂಘದ ವತಿಯಿಂದ ಆರಂಭವಾಗುವ ಸೌಹಾರ್ದ ಸಹಕಾರಿ ಸಂಘಕ್ಕೆ ಹೆಚ್ಚಿನ ಮೊತ್ತದ ನಿರಖು ಠೇವಣಿ ಇಡುವುದರೊಂದಿಗೆ ಹೆಚ್ಚಿನ ಶೇರ್‌ಗಳನ್ನು ಖರೀದಿಸುವುದಾಗಿ ತಿಳಿಸಿದರು.
ದ.ಕ. ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಜಿಲ್ಲಾ ಚೆಯರ್ಮನ್ ಪುಂಡಲೀಕ ಸುವರ್ಣ, ಜಿಲ್ಲಾಧ್ಯಕ್ಷ ದಿನೇಶ್ ಕುಮಾರ್ ಮಾತನಾಡಿದರು. ಬಂಟ್ವಾಳ ವಲಯದ ಕಾರ್ಯದರ್ಶಿ ರಾಜೇಶ್ ಸಾಲ್ಯಾನ್, ಕೋಶಾಧಿಕಾರಿ ಜನಾರ್ದನ ಕುಲಾಲ್, ಸಂಘಟನಾ ಕಾರ್ಯದರ್ಶಿ ಗಣೇಶ್ ಸುವರ್ಣ ತುಂಬೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು. ಸಹಕಾರಿ ಸಂಘದ ಸದಸ್ಯರಿಗೆ ಪಾಲು ಬಂಡವಾಳ ಪತ್ರ ವಿತರಿಸಲಾಯಿತು.
ಸಂಘದ ಗೌರವ ಸಲಹೆಗಾರ ಸುಧಾಕರ ಸಾಲ್ಯಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸುಧೀರ್ ಬೈಪಾಸ್ ವಂದಿಸಿದರು.













