ಬಂಟ್ವಾಳ: ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ ಮಾಡುವ ಸೇವೆ ದೇವರಿಗೆ ಮಾಡಿದ ಸೇವೆಯಂತೆ. ಇಂತಹ ಸೇವೆ ಮಾಡುವ ಅವಕಾಶವನ್ನು ದೇವರು ನಮಗೆ ಕರುಣಿಸಿದ್ದು ಅದನ್ನು ಸೇವಾಂಜಲಿ ಸಂಸ್ಥೆಯ ಮೂಲಕ ಮಾಡೋಣ ಎಂದು ರೋಟರಿ ಕ್ಲಬ್ 3181ನ ಮಾಜಿ ಜಿಲ್ಲಾ ಗವರ್ನರ್ ಎನ್. ಪ್ರಕಾಶ್ ಕಾರಂತ್ ಹೇಳಿದರು.
ಕ್ಷಯ ಮುಕ್ತ ಭಾರತ ನಿರ್ಮಾಣದಂಗವಾಗಿ ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಫರಂಗಿಪೇಟೆಯ ಸೇವಾಂಜಲಿ ಸಭಾಗ್ರಹದಲ್ಲಿ ಭಾನುವಾರ ನಡೆದ ಆಹಾರ ದವಸಧಾನ್ಯ ವಿತರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಿಕ್ಷಯ್ ಮಿತ್ರ ಯೋಜನೆ ಆರಂಭಗೊಂಡಂದಿನಿಂದ ಇಲ್ಲಿಯವರೆಗೆ ನಿರಂತರವಾಗಿ ಸೇವಾಂಜಲಿ ರೋಗಿಗಳಿಗೆ ಆಹಾರದ ಕಿಟ್ ವಿತರಿಸಿಕೊಂಡು ಬಂದಿದೆ, ಇದೊಂದು ಶ್ರೇಷ್ಠ ಕಾರ್ಯ ಎಂದರು.
ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ನ ಮಾಜಿ ಅಧ್ಯಕ್ಷ ಪದ್ಮರಾಜ್ ಬಲ್ಲಾಳ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಅಶಕ್ತರಿಗೆ ನೆರವಾಗುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯವನ್ನು ಸೇವಾಂಜಲಿ ಸಂಸ್ಥೆ ಮಾಡುತ್ತಿದೆ.
ಕ್ಷಯ ರೋಗ ಸ್ವಯಂಕೃತ ಅಪರಾಧದಿಂದ ಬರುವಂತದಲ್ಲ, ಸರಿಯಾದ ಆಹಾರ, ಔಷಧಿ ಸೇವನೆಯಿಂದ ರೋಗ ನಿರ್ಮೂಲಗೊಳಿಸಲು ಸಾಧ್ಯವಿದೆ ಎಂದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಪ್ರಾಸ್ತವಿಕವಾಗಿ ಮಾತನಾಡಿ ಈ ಕಾರ್ಯಕ್ಕೆ ಈವರೆಗೆ 9 ಲಕ್ಷ ರೂಪಾಯಿ ಖರ್ಚಾಗಿ 1465 ಮಂದಿಗೆ ಪೌಷ್ಠಿಕ ಆಹಾರ ನೀಡಲಾಗಿದೆ. ಈ ದಿನ 24 ಮಂದಿ ಕ್ಷಯ ರೋಗಳಿಗೆ ಕಿಟ್ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಬಿ.ನಾರಾಯಣ ಮೇರಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುರೇಶ್ ಟೈಲರ್ ಪ್ರಶಾಂತ್ ತುಂಬೆ, ದಿನೇಶ್ ಶೆಟ್ಟಿ ಕೊಟ್ಟಿಂಜ, ವಿಷು ಕುಮಾರ್, ಮಧುರಾಜ್, ಸಾರಮ್ಮ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು














