ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನಗೈದು ಮಾನವೀಯತೆ ಮೆರೆದ ಬಾಲಕಿ ಅಕ್ಷರಿ!

ಗಣೇಶ್ ಕಾಮತ್ ಮೂಡಬಿದಿರೆ
ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನಗೈದು ಮಾನವೀಯತೆ ಮೆರೆದ ಬಾಲಕಿ ಅಕ್ಷರಿ!

ಮೂಡುಬಿದಿರೆ: ಹೆಣ್ಣಿನ ಸೌಂದರ್ಯ ಆಕೆಯ ಕೇಶ ರಾಶಿಯಲ್ಲಿ ಅಡಗಿದೆ ಎನ್ನುವ ಮಾತಿದೆ. ಅದೇ ಸೌಂದರ್ಯ, ಸಂಸ್ಕಾರ, ಸಂಸ್ಕೃತಿ ಪ್ರಜ್ಞೆಯ ಪ್ರತೀಕವಾಗಿ ಬಹಳಷ್ಟುಆಸ್ಥೆಯಿಂದ ಪ್ರೀತಿಯಿಂದ ಮಾರುದ್ಧ ಬೆಳೆಸಿದ ತನ್ನ ಜಡೆಯನ್ನೇ ಕ್ಯಾನ್ಸರ್ ಪೀಡಿತರಿಗಾಗಿ ದಾನ ಮಾಡುವ ಮೂಲಕ 5ನೇ ತರಗತಿಯ ಬಾಲಕಿ ಉಜಿರೆಯ ಅಕ್ಷರಿ ಶೆಟ್ಟಿ ಗಮನ ಸೆಳೆದಿದ್ದಾರೆ.

ಈಕೆ ಮಂಗಳೂರಿನ ಮಂಗಳ ಇನ್ಸ್ಟಿಟ್ಯೂಟ್‌ಆಫ್ ಹೆಲ್ತ್ ಸೈನ್ಸ್ನಲ್ಲಿ ಪ್ರೊಫೆಸರ್‌ ಆಗಿರುವ ಶ್ರೀಮತಿ ಅಕ್ಷತಾ ಆಳ್ವ ಹಾಗು ಮೂಡುಬಿದಿರೆ ಎಕ್ಸಲೆಂಟ್ ಪದವಿ ಪೂರ್ವಕಾಲೇಜಿನ ಆಡಳಿತಾಧಿಕಾರಿ ಹರೀಶ್ ಶೆಟ್ಟಿ ದಂಪತಿಯ ಸುಪುತ್ರಿ.

ಅಕ್ಷರಿ ಶೆಟ್ಟಿ ತಾನು ಅದ್ಯಾವ ಪ್ರೀತಿಯಲ್ಲಿ ನೀಳ ಕೇಶವನ್ನು ಬೆಳೆಸಿದ್ದರೋ ಅಷ್ಟೇ ಪ್ರೀತಿಯಲ್ಲಿ ಅ ಜಡೆಯನ್ನು ಕತ್ತರಿಸಿ ಕ್ಯಾನ್ಸರ್‌ಪೀಡಿತರಿಗೆ ದಾನವಾಗಿ ನೀಡಿದರು. ನಾವು ಏನೇ ಕಲಿತರೂ ಅದು ಈ ಸಮಾಜದಿಂದ. ಹೀಗಿರುವಾಗ ಸಮಾಜಕ್ಕೆ ನಾವು ನಮ್ಮಿಂದ ಸಾಧ್ಯವಿರುವ

ಏನಾದರೊಂದನ್ನು ಕೊಡುಗೆಯಾಗಿ ನೀಡಬೇಕು ಎನ್ನುವ ನಿಟ್ಟಿನಲ್ಲಿ ಯೋಚಿಸಿದ ಈ ಹುಡುಗಿಗೆ ಕಾಣಿಸಿದ್ದು ನಿತ್ಯನಿರಂತರ ನೋವು ನರಳಾಟಗಳ ಮಧ್ಯೆ ತಮ್ಮ ಮುಂದಿನ ಜೀವನದ ಬಗ್ಗೆ ಯೋಚಿಸಲೂ ಅಸಮರ್ಥರಾಗಿ ಖಿನ್ನತೆಯ ಲೋಕದಲ್ಲಿ ಹುದುಗಿಹೋದ ಕ್ಯಾನ್ಸರ್ ಪೀಡಿತರು. ಎಲ್ಲರ ಮೊಗದಲ್ಲಿ ಅಲ್ಲವಾದರೂ ಕೆಲವರ ಮೊಗದಲ್ಲಾದರೂ ಮತ್ತೊಮ್ಮೆ ಕಳೆದುಹೋದ ಅವರ ನಗುವನ್ನು ಕಾಣಬೇಕೆಂಬ ಹಂಬಲದಿಂದ ತನ್ನ ಅತೀ ಪ್ರೀತಿಯ ಕೂದಲನ್ನು ದಾನವಾಗಿ ನೀಡಿರುವ ಈ ಬಾಲಕಿಯ ನಡೆ ಗಮನಾರ್ಹ ಮಾತ್ರವಲ್ಲ ಅನುಕರಣೀಯವಾಗಿದೆ.

Leave a Comment