ಬಂಟ್ವಾಳ: ಇಲ್ಲಿನ ಫರಂಗಿಪೇಟೆ ಸೌತ್ ಕೆನರಾ ಹೋಂ ಇಂಡಸ್ಟ್ರೀಸ್ ಡಿಪೋ ಸುಮಾರು 60 ವರ್ಷಗಳಿಂದ ಬೀಡಿ ಉದ್ದಿಮೆ ನಡೆಸುತ್ತಿದ್ದು, ಒಟ್ಟು 40 ಮಂದಿ ಬೀಡಿ ಗುತ್ತಿಗೆದಾರರು ಮತ್ತು 3 ಸಾವಿರ ಮಂದಿ ಬೀಡಿ ಕಾರ್ಮಿಕರು ದುಡಿಯುತ್ತಿದ್ದಾರೆ. ಇದೇ ಏ.1ರಿಂದ ಯಾವುದೇ ಮುನ್ಸೂಚನೆ ನೀಡದೆ ಏಕಾಯೇಕಿ ಡಿಪೋ ಮುಚ್ಚಿಕೊಂಡಿದ್ದು, ಇದನ್ನೇ ನಂಬಿಕೊಂಡಿದ್ದ ಬೀಡಿ ಗುತ್ತಿಗೆದಾರರು ಮತ್ತು ಬೀಡಿ ಕಾರ್ಮಿಕರು ಕಂಗಾಲಾಗಿದ್ದಾರೆ ಎಂದು ಸಿ ಐ ಟಿ ಯು ಮುಖಂಡ ಜೆ. ಬಾಬು ಕೃಷ್ಣ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫರಂಗಿಪೇಟೆ ಸೌತ್ ಕೆನರಾ ಹೋಂ ಇಂಡಸ್ಟ್ರೀಸ್ ಬಳಿ ಬೀಡಿ ಗುತ್ತಿಗೆದಾರರು ಮತ್ತು ಕಾರ್ಮಿಕರು ಬುಧವಾರ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಎ ಐ ಟಿ ಯು ಸಿ ಮುಖಂಡ ಸುರೇಶ್ ಕುಮಾರ್ ಬಂಟ್ವಾಳ್ ಮಾತನಾಡಿ, 'ಈಗಾಗಲೇ ಜಿಲ್ಲಾ ಸಹಾಯ ಕಾರ್ಮಿಕ ಆಯುಕ್ತರು ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ದೂರಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ'
ಎಂದು ಆರೋಪಿಸಿದರು.
ಗುತ್ತಿಗೆದಾರರಾದ ಶಿವಪ್ಪ ಸುವರ್ಣ, ಗೋಪಾಲ ಪೂಜಾರಿ, ಲಕ್ಷ್ಣಣ ಶೆಟ್ಟಿ ಮತ್ತಿತರರು ಅಳಲು ತೋಡಿಕೊಂಡರು. ಸಂಘದ ಅಧ್ಯಕ್ಷ ಗೋಪಾಲ ಪೂಜಾರಿ ಮತ್ತು ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್ ಮಾತನಾಡಿ, ಬೀಡಿ ಸಂಸ್ಥೆ ಮಾಲೀಕರು ಉದ್ಯಮ ಪುನರ್ ಆರಂಭಿಸದಿದ್ದಲ್ಲಿ ಸಹಾಯಕ ಕಾರ್ಮಿಕ ಆಯುಕ್ತರು ಮತ್ತು ಮಾಲಿಕರ ಮನೆ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.









