ಕಾಂತಾರಾ ಸಿನೇಮಾ ರೀತಿ ತುಳುನಾಡಿನ ದೈವಗಳ ಆಚರಣೆ ನಿಲ್ಲಿಸಲು ಹೊರಟ್ರಾ ಅಧಿಕಾರಿಗಳು?: ವಿವಾದ ಸೃಷ್ಟಿಸಿದ ಎಂಎಸ್ಇಝಡ್ ನಡೆ!

Coastal Bulletin
ಕಾಂತಾರಾ ಸಿನೇಮಾ ರೀತಿ ತುಳುನಾಡಿನ ದೈವಗಳ ಆಚರಣೆ ನಿಲ್ಲಿಸಲು ಹೊರಟ್ರಾ ಅಧಿಕಾರಿಗಳು?: ವಿವಾದ ಸೃಷ್ಟಿಸಿದ ಎಂಎಸ್ಇಝಡ್ ನಡೆ!

ಮಂಗಳೂರು: ಭಾರತೀಯ ಚಿತ್ರರಂಗದಲ್ಲಿ ದಾಖಲೆ ಬರೆದ ತುಳುನಾಡಿನ ದೈವಗಳ ಕುರಿತಾದ ಕಾಂತಾರ ಚಿತ್ರದಲ್ಲಿ ಒಂದು ಸನ್ನಿವೇಶವಿದೆ. ದೈವಗಳ ಕೋಲದ ಹೊತ್ತಲ್ಲಿ ಅರಣ್ಯಾಧಿಕಾರಿಯೊಬ್ಬ 'ನಿಮ್ಮ ಆಚರಣೆ ಆಡಂಬರಗಳನ್ನೆಲ್ಲಾ ಬಂದ್ ಮಾಡ್ತೀನಿ' ಎಂದು ಹೇಳುವ ದೃಶ್ಯವಿದು. ಇದೀಗ ಅದೇ ಮಾದರಿಯಲ್ಲಿ ಮಂಗಳೂರಿನಲ್ಲಿ ಸರ್ಕಾರಿ ಸ್ವಾಮ್ಯದ ಕಂಪೆನಿಯೊಂದು ತುಳುನಾಡಿನ ದೈವಾರಾಧನೆಗೆ ತಡೆಯೊಡ್ಡುವ ಮೂಲಕ ಭಾರೀ ವಿವಾದ ಸೃಷ್ಟಿಸಿದೆ. ಮಂಗಳೂರಿನಲ್ಲಿ ಮಂಗಳೂರು ವಿಶೇಷ ಆರ್ಥಿಕ ವಲಯದ(ಎಸ್ಇಝಡ್) ನಡೆ ಸದ್ಯ ಭಾರೀ ವಿವಾದ ಸೃಷ್ಟಿಸಿದೆ. ಎಂಎಸ್ಇಝಡ್ ವ್ಯಾಪ್ತಿಯಲ್ಲಿರೋ ಕಾಂತೇರಿ ಜುಮಾದಿ ದೇವಸ್ಥಾನದ ಆಚರಣೆಗೆ ಎಂಎಸ್ಇಝಡ್ ಅಧಿಕಾರಿಗಳು ತಡೆ ಒಡ್ಡಿದ ಆರೋಪ ಕೇಳಿ ಬಂದಿದೆ. ಮಂಗಳೂರು ಹೊರವಲಯದ ಬಜಪೆ ಗ್ರಾಮದ ನೆಲ್ಲಿದಡಿ ಗುತ್ತುವಿನ ಕಾಂತೇರಿ ಜುಮಾದಿ ದೈವಸ್ಥಾನಕ್ಕೆ 800 ವರ್ಷಗಳ ಇತಿಹಾಸವಿದೆ.

ಆದರೆ ಇದೀಗ ನೆಲ್ಲಿದಡಿ ಗುತ್ತಿನ ದೈವಕ್ಕೆ ಹೂವು, ನೀರು ಇಡಲು ಬಿಡುವುದಿಲ್ಲವೆನ್ನುವ ಮೂಲಕ  ಎಸ್ಇಝೆಡ್ ಅಧಿಕಾರಿಗಳು ವಿವಾದ ಸೃಷ್ಟಿಸಿದ್ದಾರೆ. ತಿಂಗಳ ಸಂಕ್ರಮಣ ಪೂಜೆ ಸಲ್ಲಿಸಲು ಎಸ್ಇಝಡ್ ಅಧಿಕಾರಿಗಳಿಂದ ತಡೆ ಒಡ್ಡಲಾಗಿದ್ದು, ಎಸ್ಇಝಡ್ ಆವರಣದ ಒಳಗಡೆ ಇರೋ ನೆಲ್ಲಿದಡಿ ಗುತ್ತುವಿನ ಕಾಂತೇರಿ ಜುಮಾದಿ ದೇವಸ್ಥಾನದಲ್ಲಿ ಸದ್ಯ ದೈವಾರಾಧನೆ ಸ್ಥಗಿತವಾಗಿದೆ. 2006ರಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ ಸಾವಿರಾರು ಎಕರೆ ಜನವಸತಿ ಜಾಗ ಸರ್ಕಾರದಿಂದ ಭೂ ಸ್ವಾಧೀನವಾಗಿತ್ತು. ಬಜ್ಪೆ, ಬಾಳ, ಕುತ್ತೆತ್ತೂರು, ಪೆರ್ಮುದೆ ಕಳವಾರು ಗ್ರಾಮದ ಸಾವಿರಾರು ಎಕರೆ ಭೂ ಸ್ವಾಧೀನವಾಗಿತ್ತು. ಸಮೃದ್ಧ ಗದ್ದೆಗಳು, ಸಾವಿರಾರು ನಾಗಬನಗಳು, ಬ್ರಹ್ಮಸ್ಥಾನಗಳು, ದೈವದ ಗುಡಿಗಳು, ಕೆರೆ, ತೊರೆ, ಶಾಲೆ, ಚರ್ಚು, ಮಸೀದಿ ಸಾವಿರಾರು ಮನೆಗಳು ಭೂ ಸ್ವಾಧೀನಕ್ಕೆ ನೆಲಸಮವಾಗಿತ್ತು.

ಕಳೆದ ಸಂಕ್ರಮಣದ ದಿನ ನಮಗೆ

ತಡೆ ಒಡ್ಡಿದ್ದಾರೆ, ಅಲ್ಲಿಗೆ ಹೋಗಲು ಬಿಡಲ್ಲ ಅಂತ ಗೇಟ್‌ನಲ್ಲಿ ನಿಲ್ಲಿಸಿದ್ದಾರೆ. ಮಾರ್ಚ್‌, ಎಪ್ರಿಲ್‌ನಲ್ಲಿ ಅಲ್ಲಿ ಚಾವಡಿ ನೇಮ, ಬಂಡಿ ಉತ್ಸವಗಳು ನಡೆಯುತ್ತೆ, ಅದಕ್ಕೆ ಏನ್‌ ಮಾಡೋದು? ನಮಗೆ ಯಾವ ಅಧಿಕಾರಿಯನ್ನ ಸಂಪರ್ಕಿಸಿದ್ರೂ  ಸಮಸ್ಯೆಗೆ ಪರಿಹಾರವೇ ಸಿಕ್ಕಿಲ್ಲ. ಡಿಸಿ, ಎಸಿ, ಎಂಪಿ, ಎಂಎಲ್‌ಎ ಯಾರನ್ನ ಭೇಟಿಯಾದ್ರೂ ಆಚರಣೆಗೆ ಅನುಮತಿ ಸಿಕ್ಕಿಲ್ಲ. ದೈವಸ್ಥಾನದ ಜಾಗ ಕೈಗಾರೀಕರಣದ ಮಧ್ಯೆಯೂ ಅಲ್ಲಿ ಉಳಿದಿದೆ, ಆದರೆ ಈಗ ಆಚರಣೆಗೆ ಸಮಸ್ಯೆ ಬಂದಿದೆ. ಜನರ ಭಾವನೆಗಳ ಮೇಲೆ ಆಟವಾಡಿ ಕೈಗಾರೀಕರಣ, ಅಭಿವೃದ್ದಿ ನಮಗೆ ಬೇಡವೇ ಬೇಡ. ಎಸ್‌ಇಝಡ್‌ ಅಧಿಕಾರಿಗಳು, ಸ್ಥಳೀಯ ಜಿಲ್ಲಾಡಳಿತ ನೆಲ್ಲಿದಡಿಗುತ್ತು ದೈವಾರಾಧನೆ ನಿಲ್ಲಿಸಬಾರದು.‌ ಈಗ ಅಧಿಕಾರಿಗಳು ತಡೆ ಒಡ್ಡಿದ ಕಾರಣದಿಂದ ಗ್ರಾಮದ ಜನರಿಗೆ ದೈವದ ಪ್ರಸಾದ ಸಿಗದಂತೆ ಆಗಿದೆ ಎಂದು ವರದಿಯಾಗಿದೆ.

Leave a Comment