ಮಂಗಳೂರು: ಶಾಂತಗೊಳ್ಳುತ್ತಿದ್ದ ಮಂಗಳೂರು ಮತ್ತೆ ಉದ್ವಿಘ್ನಗೊಂಡಿದೆ. ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಿಂದ ಮಂಗಳೂರಿನಲ್ಲಿ ಆಕ್ರೋಶದ ಜ್ವಾಲೆ ಭುಗಿಲೆದ್ದಿದೆ. ವಿಶ್ವ ಹಿಂದೂ ಪರಿಷತ್ ಹಿಂದೂ ಕಾರ್ಯಕರ್ತನ ಹತ್ಯೆ ಖಂಡಿಸಿ ದಕ್ಷಿಣ ಕನ್ನಡ ಬಂದ್‌ಗೆ ಕರೆ ನೀಡಿದೆ. ಇತ್ತ ಮಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಜಮಾಯಿಸಿದ ಕಾರಣ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸುಹಾಸ್ ಶೆಟ್ಟಿ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆಗೆ ಆಗ್ರಹ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಮಂಗಳೂರು ಪೊಲೀಸರು ಆರೋಪಿಗಳ ಸುಳಿವು ಪತ್ತೆ ಹಚ್ಚಿದ್ದಾರೆ.
ಆರೋಪಿಗಳು ಯಾರು ಎಂದು ಗೊತ್ತಾಗಿದೆ
ಸುಹಾಸ್ ಶೆಟ್ಟಿ ಮೇಲೆ ದಾಳಿ ನಡೆಸಿ ಪರಾರಿಯಾದ ಆರೋಪಿಗಳು ಯಾರು ಎಂದು ನಮಗೆ ಗೊತ್ತಾಗಿದೆ. ಆರೋಪಿಗಳ ಬಂಧನಕ್ಕೆ ತಂಡ
ರಚನೆ ಮಾಡುತ್ತೇವೆ. ಆರೋಪಿಗಳ ಸುಳಿವನ್ನು ಈಗಾಗಲೇ ಪತ್ತೆ ಹಚ್ಚಲಾಗಿದೆ ಎಂದು ಎಡಿಜಿಪಿ ಆರ್.ಹಿತೇಂದ್ರ ಹೇಳಿದ್ದಾರೆ. ಕಾನೂನು ಕೈಗೆತ್ತಿಕೊಂಡವರ ಮೇಲೆ ಕಾನೂನು ರೀತಿ ಕ್ರಮ ಆಗಲಿದೆ ಎಂದು ಹಿತೇಂದ್ರ ಹೇಳಿದ್ದಾರೆ.














