ಬಂಟ್ವಾಳ:ಇಲ್ಲಿನ ವಾಮದಪದವು ಸಮೀಪದ ತಿಮರಡ್ಕ ನಿವಾಸಿ, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗ ಉಪಾಧ್ಯಕ್ಷ ಪದ್ಮನಾಭ ಸಾಮಂತ್ (32) ಇವರ ಮೃತದೇಹ ಭಾನುವಾರ ಮನೆ ಸಮೀಪದ ಮರವೊಂದರಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಅಲ್ಲ. ಇದೊಂದು ವ್ಯವಸ್ಥಿತ ಕೊಲೆ ಎಂಬ ಶಂಕೆ ಮೃತರ ಕುಟುಂಬ ಮತ್ತು ಸ್ಥಳೀಯರಲ್ಲಿ ವ್ಯಕ್ಯವಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪೊಲೀಸರು ಸಮರ್ಪಕವಾಗಿ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಆಗ್ರಹಿಸಿದ್ದಾರೆ.
ಬಿ.ಸಿ.ರೋಡಿನಲ್ಲಿ ಸೋಮವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 'ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಮುಖಂಡರು ಸೋಮವಾರ ಸಂಜೆಯೇ ಎಸ್ಪಿಗೆ ಪ್ರತ್ಯೇಕ ಮನವಿ ಸಲ್ಲಿಸಲಾಗುವುದು' ಎಂದರು.
ಆರ್ ಟಿ ಐ ಕಾರ್ಯಕರ್ತನಾಗಿದ್ದ ಇವರು ಬಂಟ್ವಾಳ ಕ್ಷೇತ್ರದಲ್ಲಿ ಶಾಸಕರ ನೇತೃತ್ವದ ಅಕ್ರಮ-ಸಕ್ರಮ ಸಮಿತಿಯು ಸುಮಾರು 80ಕ್ಕೂ ಮಿಕ್ಕಿ ಮಂದಿಗೆ ಅಕ್ರಮ ಜಮೀನು ಮಂಜೂರಾತಿ ಮಾಡಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿ, ಈ ಬಗ್ಗೆ ಹಲವಾರು ಮಂದಿಗೆ ನೋಟೀಸು ಜಾರಿಗೊಂಡಿದೆ. ಕೆಲವೊಂದು ರಸ್ತೆಗಳಿಗೆ ಕಳಪೆ ಡಾಂಬರೀಕರಣ ಮೂಲಕ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡರ ವಿರುದ್ಧವೂ ದೂರು ಸಲ್ಲಿಸಿ ವಿರೋಧ ಕಟ್ಟಿಕೊಂಡಿದ್ದರು.
ಈ ಹಿಂದೆಯೂ ಸಾಮಂತ್ ಅವರ ಬೈಕ್ ಅಡ್ಡಕಟ್ಟಿ ಜೀವ ಬೆದರಿಕೆ ಒಡ್ಡಿದ ಪ್ರಸಂಗವೂ ನಡೆದಿದೆ. ಹಲವಾರು ಮಂದಿ ಮೊಬೈಲ್ ಕರೆ ಮೂಲಕ ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಪೊಲೀಸ್ ಮಹಾ ನಿರ್ದೇಶಕರಿಗೆ ಸ್ವತಃ ಸಾಮಂತ್ ದೂರು ಸಲ್ಲಿಸಿರುವ ಬಗ್ಗೆಯೂ ದಾಖಲೆ ಇದೆ. ಮೃತ ದೇಹದಲ್ಲಿ ಪರಚಿತ ಗಾಯ ಮತ್ತು ತಲೆಯಲ್ಲಿ ರಕ್ತದ
ಗಾಯ ಕಂಡು ಬಂದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಳೆದ ನಾಲ್ಕೈದು ದಿನಗಳ ಹಿಂದೆಯಷ್ಟೇ ಸಕರ್ಾರಿ ಉದ್ಯೋಗ ಕೊಡಿಸುವುದಾಗಿ ಹೇಳಿ ಯುವಕನೊಬ್ಬನಿಂದ ರೂ 1.5 ಲಕ್ಷ ಪಡೆದಿರುವ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಆ ಮೊತ್ತವನ್ನು ಠಾಣೆಗೆ ತಲುಪಿಸಲು ಸ್ವತಃ ಸಾಮಂತ್ ತೆರಳಿದ್ದರೂ ದೂರು ನೀಡಿದ್ದ ಯುವಕ ಬಾರದಿರುವ ಬಗ್ಗೆಯೂ ಹಲವು ಸಂಶಯ ಮೂಡಿಸಿದೆ. ಈ ಬಗ್ಗೆ ಸಮಗ್ರ ತನಿಕೆ ನಡೆಸದಿದ್ದಲ್ಲಿ ಜಿಲ್ಲೆಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸುವುದಾಗಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಎಚ್ಚರಿಸಿದರು.
ಪದ್ಮನಾಭ ಸಾಮಂತ್ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಪುಕ್ಕಲು ವ್ಯಕ್ತಿ ಅಲ್ಲ. ಆತ್ಮಹತ್ಯೆ ಮಾಡಿಕೊಂಡಿದ್ದರೆ ಕಾರಣೀಭೂತರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೊದಲೇ ಬರೆದುಕೊಳ್ಳುವಷ್ಟು ಧೈರ್ಯವಂತರಾಗಿದ್ದರು ಎಂದು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಪಿಯೂಸ್ ಎಲ್.ರಾಡ್ರಿಗಸ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪದ್ಮಶೇಖರ್ ಜೈನ್ ,ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ ಜೋರ, ಪ್ರಶಾಂತ್ ಕುಲಾಲ್, ವೆಂಕಪ್ಪ ಪೂಜಾರಿ, ಚಂದ್ರಹಾಸ ನಾಯ್ಕ್, ಡೆಂಝಿಲ್, ಪ್ರವೀಣ ರಾಡ್ರಿಗಸ್ ಇದ್ದರು.









