Coastal Bulletin

ಬಂಟ್ವಾಳ: ಹಿಂದೂ ಜಾಗರಣಾ ವೇದಿಕೆ ಬಂಟ್ವಾಳ ತಾಲೂಕು ಘಟಕ ಮತ್ತು ಕಾರಿಂಜ ಕ್ಷೇತ್ರ ಸಂರಕ್ಷಣಾ ಸಮಿತಿ ಕಾರಿಂಜ ಕ್ಷೇತ್ರದ ಸಂರಕ್ಷಣೆ, ಪಾವಿತ್ರ್ಯತೆಯನ್ನು ಉಳಿಸುವ ನಿಟ್ಟಿನಲ್ಲಿ ಜನಾಂದೋಲನದ ಭಾಗವಾಗಿ ಶಿವಮಾಲಾಧಾರಣೆ, ಕೋಟಿ ನಾಮಸಂಕೀರ್ತನೆಯ ಸಂಪ್ರದಾಯಕ್ಕೆ ಈ ವರ್ಷದಿಂದ ಮುನ್ನುಡಿ ಬರೆದಿದೆ.

ಈ ಕುರಿತಾಗಿ ಗುರುವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಹಿ.ಜಾ.ವೇ.ಯ ಪ್ರಾಂತ ಪ್ರಮುಖ ರಾಧಕೃಷ್ಣ ಅಡ್ಯಂತಾಯ ಅವರು ಕಾರಿಂಜ ಕ್ಷೇತ್ರದ ಸಂರಕ್ಷಣೆಗಾಗಿ ಈಗಾಗಲೇ ಮೂರು ಹಂತದಲ್ಲಿ ಜನಜಾಗೃತಿ ರೂಪಿಸಿ ನಡೆಸಿರುವ ಹೋರಾಟಕ್ಕೆ ಸಮಸ್ತ ಹಿಂದೂ ಸಮಾಜ,ದೇವಳದ ಆಡಳಿತ ಮಂಡಳಿ,ಸಂಘಪರಿವಾರ ಸಂಘಟನೆಯ ಪ್ರಮುಖರು,ಶಾಸಕರು,ಸಂಸದರು, ಸಚಿವರ ಸಹಕಾರ, ಬೆಂಬಲದಿಂದ ಕ್ಷೇತ್ರದ ಪರಿಸರದಲ್ಲಿ ನಡೆಯತ್ತಿದ್ದ ಗಣಿಗಾರಿಕೆ ಸ್ಥಗಿತಗೊಂಡಿದೆ ಹಾಗೆಯೇ ಮತ್ತೆ ಗಣಿಗಾರಿಕೆ ಪುನರಾರಂಭವಾಗದಂತೆ ಕ್ರಮಕೈಗೊಳ್ಳುವ ಭರವಸೆಯು ಸಂಬಂಧಿತರಿಂದ ಸಿಕ್ಕಿದೆ ಎಂದರು.

ಕ್ಷೇತ್ರ ಸಂರಕ್ಷಣೆ ಹಾಗೂ ಪಾವಿತ್ರ್ಯತೆ ಉಳಿಸುವ ಹೋರಾಟದ ರೂಪ ಇದೀಗ 4 ನೇ ಹಂತವಾಗಿ ಜನಾಂದೋಲನದ ಕಡೆಗೆ ಸಾಗಿದೆ.ಇದರ ಭಾಗವಾಗಿ ಪೇಜಾವರ,ಒಡಿಯೂರು,ಮಾಣಿಲ ಶ್ರೀಗಳ ಮಾರ್ಗದರ್ಶನದಂತೆ ಫೆ.27 ರಂದು "ಶಿವಮಾಲಾಧಾರಣೆ" ಎಂಬ ಹೊಸ ಸಂಪ್ರದಾಯದ ಪ್ರಾರಂಭದ ಸಿದ್ದತೆಯು ನಡೆಯುತ್ತಿದ್ದು,ಅಂದು

ಪೂರ್ವಾಹ್ನ 6. ಗಂಟೆಯ ಒಳಗಾಗಿ ಶುಚಿಭೂರ್ತರಾಗಿ ರುದ್ರಾಕ್ಷಿ ಮಾಲಾಧಾರಣೆಗೈದು ಮಾ.1 ರ ಶಿವರಾತ್ರಿಯ ದಿನದಂದು ಅಪರಾಹ್ನ 4 ಗಂಟೆಗೆ ಮಾಲಾಧಾರಿಗಳು ಮತ್ತು ಶಿವಭಕ್ತ ರಿಂದ ಸಂಕೀರ್ತನೆ ಯಾತ್ರೆ ನಡೆಯಲಿದೆ.ಮಾ. 2 ರಂದು ಬೆಳಿಗ್ಗಿನ ಪೂಜೆಯ ಬಳಿಕ ಮಾಲಾ ವಿಸರ್ಜನೆ ನಡೆಯಲಿದೆ ಎಂದು ವಿವರಿಸಿದರು.

ಮಾಲಾಧಾರಿಗಳು ಈ ಸಂದರ್ಭದಲ್ಲಿ ಅದರ ಪಾವಿತ್ರ್ಯತೆ ಯನ್ನು ಉಳಿಸುವ ನಿಟ್ಟಿನಲ್ಲಿ ವೃತಾಚರಣೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು‌ ಎಂದ ಅಡ್ಯಂತಾಯ ಅವರು ಶಿವರಾತ್ರಿಯಂದು ಒಂದು ಕೋಟಿ ಶಿವನಾಮ ಜಪಿಸುವ ಮೂಲಕ ಈ ಆಂದೋಲನದಲ್ಲಿ ಭಾಗವಹಿಸಬೇಕು ಇದಕ್ಕಾಗಿ ಸಮಸ್ತ ಹಿಂದೂ ಸಮಾಜ ತಮ್ಮ ಮನೆ ಸಮೀಪದ ಭಜನಾ ಮಂದಿರ,ದೇವಸ್ಥಾನ ಅಥವಾ ತಮ್ಮ ಮನೆಯಲ್ಲೇ 108 ಬಾರಿ ಶಿವನಾಮವನ್ನು ಜಪಿಸುವಂತೆ ಮನವಿ ಮಾಡಿದರು.

ಹಿ.ಜಾ.ವೇ.ಪ್ರಮುಖರಾದ ಜಗದೀಶ್ ನೆತ್ತರಕರೆ,ನರಸಿಂಹ ಮಾಣಿ ಪ್ರಶಾಂತ್ ಕೆಂಪು ಗುಡ್ಡೆ, ರಾಜೇಶ್ ಬೊಳ್ಳುಕಲ್ಲು ಉಪಸ್ಥಿತರಿದ್ದರು.


 

Leave a Comment