ಮಂಗಳೂರು:ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಆಗಸ್ಟ್ ಒಂದರಿಂದ ಬಾಕಿ ಉಳಿದಿರುವ ಪದವಿ ಪರೀಕ್ಷೆಗಳು ಆರಂಭವಾಗುತ್ತಿವೆ. ಪರೀಕ್ಷೆ ಮುಂದೂಡದೇ ನಿಗದಿಪಡಿಸಿದ ವೇಳಾಪಟ್ಟಿಯಂತೆಯೇ ಪರೀಕ್ಷೆ ನಡೆಸಲು ವಿಶ್ವವಿದ್ಯಾನಿಲಯ ತೀರ್ಮಾನಿಸಿದೆ.
'ಕೇರಳ ವಿದ್ಯಾರ್ಥಿಗಳು ಈಗಾಗಲೇ ಜಿಲ್ಲೆಗೆ ಆಗಮಿಸಿ ಹಾಸ್ಟೆಲ್, ರೂಮ್, ಪಿಜಿಗಳಲ್ಲಿ ಓದುತ್ತಿದ್ದಾರೆ. ಗಡಿಭಾಗದಿಂದ ನಿತ್ಯ ಕಾಲೇಜಿಗೆ ಆಗಮಿಸುವವರು ಬೆರಳೆಣಿಕೆ ವಿದ್ಯಾರ್ಥಿಗಳಿಗೆ ಮಾತ್ರ ಈಗ ಪರೀಕ್ಷೆಗೆ ಹಾಜರಾಗಲು ತೊಂದರೆಯಾಗಲಿದೆ. ಅಂತಹವರಿಗೆ ಮರು ವಿಶೇಷ ಪರೀಕ್ಷೆ ನಡೆಸಲಾಗುವುದು' ಎಂದು ವಿವಿ ಸ್ಪಷ್ಟಪಡಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ವಿವಿ ಕುಲಪತಿ ಪ್ರೊ ಪಿ ಎಸ್ ಯಡಪಡಿತ್ತಾಯ ಅನನುಕೂಲವಾದವರಿಗೆ ವಿಶೇಷ ಪರೀಕ್ಷೆ ಈಗಾಗಲೇ ನಿಗದಿಪಡಿಸಿದಂತೆ ನಾಳೆ (ಆಗಸ್ಟ್ 2 )ಸೆಮಿಸ್ಟರ್ ಪರೀಕ್ಷೆಗಳು ನಡೆಯಲಿವೆ. ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗುವ ಯಾವ
ಪ್ರಮೇಯವೂ ಇಲ್ಲ. ಗಡಿ ಪ್ರದೇಶದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಅನಾನುಕೂಲವಾದರೆ ಅಂತಹವರಿಗಾಗಿ ವಿಶೇಷ ಪರೀಕ್ಷೆ ನಡೆಸಲಾಗುವುದು. ಇವರಲ್ಲದೆ ಕೋವಿಡ್ ಸೋಂಕಿಗೆ ಒಳಗಾಗಿ ಪರೀಕ್ಷೆ ಬರೆಯಲು ಅಸಾಧ್ಯವಾದರೆ ಅಂತಹ ವಿದ್ಯಾರ್ಥಿಗಳು ವೈದ್ಯಕೀಯ ದೃಢಪತ್ರ ಜೊತೆಗೆ ಪ್ರಾಂಶುಪಾಲರ ಪತ್ರದೊಂದಿಗೆ ವಿವಿಗೆ ಸಲ್ಲಿಸಬೇಕಾಗುತ್ತದೆ ಎಂದಿದ್ದಾರೆ.
ಇದೇ ವೇಳೆ ವಿವಿ ಪರೀಕ್ಷೆಗೆ ಹಾಜರಾಗಲು ಕೇರಳ ವಿದ್ಯಾರ್ಥಿಗಳಿಗೆ ಗಡಿ ಪ್ರದೇಶದಲ್ಲಿ ಅವಕಾಶ ನೀಡುವಂತೆ ಕೋರಿ ಕಾಸರಗೋಡು ಬಿಜೆಪಿ ಅಧ್ಯಕ್ಷ ನ್ಯಾಯವಾದಿ ಶ್ರೀಕಾಂತ್ ಅವರು ಭಾನುವಾರ ಕರ್ನಾಟಕ ಮುಖ್ಯಮಂತ್ರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.















