ಬೆಂಗಳೂರು: ‘ಮಕ್ಕಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಕೂಡಲೇ ಶಾಲೆಗಳನ್ನು ಪುನರಾರಂಭಿಸಬೇಕು’ ಎಂದು ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘ ಆಗ್ರಹಿಸಿದೆ.
‘ಶಾಲೆಗಳನ್ನು ಆರಂಂಭಿಸುವಂತೆ ನಾವು ಮಾಡಿದ್ದ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಮ್ಮನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಶಾಲೆಗಳನ್ನು ಯಾವುದೇ ವಿಳಂಬ ಮಾಡದೆ ಆರಂಭಿಸುವಂತೆ ಈಗಾಗಲೇ ನಾವು ಬೇಡಿಕೆ ಇಟ್ಟಿದ್ದೇವೆ’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಹಾಲನೂರ್ ಎಸ್. ಲೇಪಾಕ್ಷ್ ಹೇಳಿದ್ದಾರೆ.
ರಾಜ್ಯ ಸರ್ಕಾರ ರಚಿಸಿದ್ದ ಕಾರ್ಯಪಡೆ ಮತ್ತು ಡಾ. ದೇವಿಶೆಟ್ಟಿ ನೇತೃತ್ವದ ತಜ್ಞರ ಸಮಿತಿ ಈಗಾಗಲೇ ಶಾಲೆಗಳನ್ನು ಆರಂಭಿಸುವಂತೆ ಹೇಳಿದೆ. ಶಾಲೆ ಆರಂಭಿಸಲು ಜುಲೈ 30 ಕೊನೆಯ ಗಡುವನ್ನು 10 ದಿನಗಳ ಮೊದಲೇ ಸರ್ಕಾರ ಮತ್ತು ಇಲಾಖೆಯ ಗಮನಕ್ಕೆ ಸಂಘ ನೀಡಿದ್ದರೂ ಯಾವುದೇ ಕ್ರಮ ವಹಿಸಿಲ್ಲ’ ಎಂದು ಅವರು ದೂರಿದರು.
2019–20ನೇ ಸಾಲಿನ ಆರ್‌ಟಿಇ ಹಣ ಸರ್ಕಾರ ಬಿಡುಗಡೆ
ಮಾಡಿದ್ದರೂ ಶಾಲೆಗಳ ಖಾತೆಗೆ ಜಮೆ ಆಗಿಲ್ಲ. ಈ ಬಗ್ಗೆ ಖಾತೆಗೆ ಹಣ ವರ್ಗಾಯಿಸಲು ಅಧಿಕಾರಿಗಳಿಗೆ ಸೂಚನೆ ನೀಡಿ ಕ್ರಮ ತೆಗೆದುಕೊಳ್ಳಬೇಕು,2020–21ನೇ ಸಾಲಿನ ಆರ್‌ಟಿಇ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ಖಾಸಗಿ ಶಾಲೆಗಳ ಶಿಕ್ಷಕರಿಗೆ ಸರ್ಕಾರ ಘೋಷಿಸಿರುವ ₹ 5,000 ಪ್ಯಾಕೇಜ್ ಕೂಡಲೇ ಖಾತೆಗೆ ಜಮೆ ಮಾಡಬೇಕು. 2000 ಇಸವಿಯ ಒಳಗೆ ಆರಂಭವಾಗಿರುವ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಲಾಗುವುದು ಎಂಬ ಸರಕಾರದ ಭರವಸೆಯನ್ನೂ ಈಡೇರಿಸಬೇಕು’ ಎಂದು ಆಗ್ರಹಿಸಿದರು.
‘ಖಾಸಗಿ ಶಾಲೆಗಳ ಮೇಲಿನ ಮಲತಾಯಿ ಧೋರಣೆಯನ್ನು ಬಿಟ್ಟು ಶಾಲೆಗಳ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ಜೊತೆಗೆ, ನಮ್ಮ ಕೆಲವು ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಸಿಎಂ ಗೆ ಮನವಿ ನೀಡಲಾಗಿದೆ’ ಎಂದು ಲೇಪಾಕ್ಷ ತಿಳಿಸಿದರು.















