ಕಾಸರಗೋಡು : ಕೇರಳದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಕಾಸರಗೋಡುಗೆ ಸಂಚರಿಸುವ ಸರ್ಕಾರಿ ಹಾಗೂ ಖಾಸಗಿ ಬಸ್‍ಗಳನ್ನು ಆಗಸ್ಟ್ 1 ರಿಂದ ಒಂದು ವಾರದ ಕಾಲ ಸ್ಥಗಿತಗೊಳಿಸಲಾಗುವುದು ಎಂದು ಸಂಸದ ನಳೀನ್ ಕುಮಾರ್ ಕಟೀಲು ಅವರು ಹೇಳಿಕೆ ನೀಡಿದ ಬೆನ್ನಲ್ಲೇ ನಾಳೆ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಗೊಂದಲ ಹಾಗೂ ಆಘಾತಕ್ಕೊಳಗಾಗಿದ್ದಾರೆ.
ಈ ಬಗ್ಗೆ ಗಡಿನಾಡ ವಿದ್ಯಾರ್ಥಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ 'ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಕೇರಳ ರಾಜ್ಯದಿಂದ ಬರುವ ವಿದ್ಯಾರ್ಥಿ ಗಳ ಸಂಖ್ಯೆ ಅಧಿಕವಾಗಿದೆ. ಆದರೆ ನಮ್ಮ ಸಮಸ್ಯೆ ಗಳನ್ನು ಕೇಳುವವರಿಲ್ಲ.ಬೇರೆ ರಾಜ್ಯದ ವಿದ್ಯಾರ್ಥಿಗಳೆಂಬ ಉಡಾಫೆ,ತಾತ್ಸಾರವೋ ಗೊತ್ತಿಲ್ಲ. ಪದವಿ ವಿದ್ಯಾರ್ಥಿ ಗಳ ಮುಂದೂಡಿಕೆಯಾದ 1 3 5 sem ಗಳ ಪರೀಕ್ಷೆಯನ್ನು 2 ನೇ ತಾರೀಕಿನಿಂದ ನಡೆಸಲು ವಿಶ್ವವಿದ್ಯಾನಿಲಯದವರು ತೀರ್ಮಾನ ಕೈಗೊಂಡಿದ್ದಾರೆ. ಆದರೆ ಕಾಕತಾಳಿಯವೋ ಪೂರ್ವ ನಿಯೋಜಿತವೋ ಗೊತ್ತಿಲ್ಲ,ಪರೀಕ್ಷೆ ನಡೆಸುವ ಮೊದಲಿನ ದಿನ ಕೇರಳದಿಂದ ಕರ್ನಾಟಕಕ್ಕೆ ಹೋಗುವ ಸಾರಿಗೆ ಸಂಚಾರವನ್ನು ಕರ್ನಾಟಕದಿಂದ ಅಧಿಕೃತವಾಗಿ ನಿರ್ಬಂಧಿಸಲಾಗಿದೆ.ಜೊತೆಗೆ ಕೇರಳದಿಂದ ಬರುವವರಿಗೆ ಆರ್ ಟಿ ಪಿ ಸಿ ಆರ್ ಟೆಸ್ಟ್ ಕೂಡ ಕಡ್ಡಾಯಗೊಳಿಸಲಾಗಿದೆ.ಸಂಬಂಧಪಟ್ಟವರಲ್ಲಿ ವಿಚಾರಿಸಿದಾಗ ನಿಮಗೆ ಆಗದಿದ್ದರೆ ಪರೀಕ್ಷೆ ಬರೆಯಬೇಡಿ,ಅಥವಾ ಖಾಸಗಿ ವಾಹನಗಳಲ್ಲಿ ಪರೀಕ್ಷೆ ಬರೆಯಲು ಬನ್ನಿ ಎಂದು ಉಢಾಫೆ ಉತ್ತರ ಕೊಡುತ್ತಾರೆ.ಹತ್ತು ದಿನ ಮೊದಲೇ ಪರೀಕ್ಷೆಯ ವೇಳಾಪಟ್ಟಿ ಬರುವಾಗ ನೀವೆಲ್ಲರೂ ಕೇರಳದಿಂದ ಮಂಗಳೂರಿನಲ್ಲಿ ಬಂದು ರೂಮ್ ಮಾಡಿ ನಿಲ್ಲಬೇಕಿತ್ತು
ಎನ್ನತ್ತಾರೆ.ಇವರಿಗೇನು ಗೊತ್ತು ಗಡಿನಾಡ ವಿದ್ಯಾರ್ಥಿಗಳ ಕಷ್ಟ? 10 ದಿನ ಮೊದಲು ನಮಗೆ ಇವರು ಸಂಚಾರಕ್ಕೆ ನಿರ್ಬಂಧ ಹೇರುತ್ತಾರೆ ಎಂದು ಕನಸು ಬೀಳುತ್ತದೆಯೇ?ಗಡಿನಾಡ ವಿದ್ಯಾರ್ಥಿಗಳ ಮೇಲೆ ನಿಮಗೆ ಯಾಕೆ ಇಷ್ಟೊಂದು ತಾತ್ಸಾರ..ಈಗ ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ ವಿಶೇಷ ಪರೀಕ್ಷೆ ನಡೆಸುತ್ತೇವೆ ಎಂದು ಹೇಳುವ ಉದಾರ ಮನೋಭಾವದ ನಿಮಗೆ ಕಳೆದ ಬಾರಿ ಕರ್ನಾಟಕ ಸಾರಿಗೆ ಮುಷ್ಕರ ಆದ ಸಂದರ್ಭದಲ್ಲಿ ಪರೀಕ್ಷೆ ಮುಂದೂಡುವ ಬದಲು ಗೈರುಹಾಜರಾದ ವಿದ್ಯಾರ್ಥಿಗಳಿಗೆ ವಿಶೇಷ ಪರೀಕ್ಷೆ ನಡೆಸಬಹುದಿತ್ತಲ್ಲವೇ? ಗಣನೀಯ ಸಂಖ್ಯೆಯಲ್ಲಿ ಕೇರಳ ರಾಜ್ಯದ ವಿದ್ಯಾರ್ಥಿಗಳು ಇದ್ದರೂ ಕೂಡ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ನಿಮ್ಮ ನ್ಯಾಯಗಳು ಎಷ್ಟು ಸರಿ? ಹೀಗೆ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ.ವಿದ್ಯೆಯ ವಿಷಯದಲ್ಲೂ ರಾಜಕಾರಣ ಮಾಡುವ ನಿಮಗೆ ನಾಚಿಕೆಯಾಗುವುದಿಲ್ಲವೇ. ಎಷ್ಟೋ ವಿದ್ಯಾರ್ಥಿಗಳು ಬಡತನದ ಬೇಗೆಯಲ್ಲಿದ್ದರೂ ವಿದ್ಯಾಭ್ಯಾಸಕ್ಕೆ ಇಷ್ಟೊಂದು ಕಷ್ಟ ಪಡುತ್ತಿರುವಾಗ ಅವರನ್ನು ತುಳಿಯುತ್ತಿರುವ ನೆನಪಿರಲಿ ಮುಂದೊಂದು ದಿನ ನಿಮ್ಮ ಮಕ್ಕಳಿಗೂ ಇದೇ ಪರಿಸ್ಥಿತಿ ಬಂದೀತು' ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.















