Coastal Bulletin

ಬೆಂಗಳೂರು: ಗಣೇಶ ಚತುರ್ಥಿ ಮತ್ತು ಮೊಹರಂ ಆಚರಿಸುವ ಕುರಿತು ರಾಜ್ಯ ಸರ್ಕಾರ ಅಧಿಕೃತ ಗೈಡ್ಲೈನ್ಸ್ ಬಿಡುಗಡೆ ಮಾಡಿದೆ. ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿನ ಹಬ್ಬಗಳಿಗೆ ಗೈಡ್ಲೈನ್ಸ್ ಹೊರಡಿಸಲಾಗಿದ್ದು, ಹಬ್ಬಗಳಲ್ಲಿ ಕೊರೊನಾ ನಿಯಮ ಪಾಲಿಸುವಂತೆ ಆದೇಶಿಸಲಾಗಿದೆ.

ಗಣೇಶ ಹಬ್ಬ ಆಚರಣೆಗೆ ರಾಜ್ಯ ಸರ್ಕಾರದಿಂದ ರೂಪಿಸಿರುವ ಗೈಡ್​​ಲೈನ್ಸ್ ಇಂತಿದೆ: 

1) ಗಣೇಶ ಚತುರ್ಥಿ ಹಬ್ಬವನ್ನು ಸರಳ ರೀತಿಯಲ್ಲಿ, ಭಕ್ತಿಪೂರ್ವಕವಾಗಿ ದೇವಸ್ಥಾನದೊಳಗೆ ಮತ್ತು ತಮ್ಮ ತಮ್ಮ ಮನೆಗಳಲ್ಲಿ ಆಚರಿಸತಕ್ಕದ್ದು. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಹೊರಾಂಗಣಗಳಲ್ಲಿ ಚಪ್ಪರ/ಪೆಂಡಾಲ್/ಶಾಮಿಯಾನ ವೇದಿಕೆಗಳನ್ನು ನಿರ್ಮಿಸಿ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡುವಂತಿಲ್ಲ.

2) ಗಣೇಶ ಮೂರ್ತಿಗಳನ್ನು ತರುವಾಗ ಹಾಗೂ ವಿಸರ್ಜಿಸುವಾಗ ಯಾವುದೇ ರೀತಿಯ ಮೆರವಣಿಗೆ / ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ,

3) ಪಾರಂಪರಿಕ ಗೌರಿ-ಗಣೇಶ ಮೂರ್ತಿಯನ್ನು ಪೂಜಿಸುವವರು ಅವುಗಳನ್ನು ಮನೆಯಲ್ಲಿಯೇ ವಿಸರ್ಜಿಸುವುದು ಅಥವಾ ಮೂರ್ತಿಗಳನ್ನು ಅತೀ ಸಮೀಪವಾಗುವಂತಹ ಮಾರ್ಗಗಳನ್ನು ಬಳಸಿಕೊಂಡು, ಮಹಾನಗರ ಪಾಲಿಕೆ, ಜಿಲ್ಲಾಡಳಿತ / ಹತ್ತಿರದ ಸ್ಥಳೀಯ ಸಂಸ್ಥೆಗಳ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಈಗಾಗಲೇ ನಿರ್ಮಿಸಲಾದ ಹೊಂಡ, ಕಲ್ಯಾಣಿ ಅಥವಾ ಮೊಬೈಲ್ ಟ್ಯಾಂಕ್‌ಗಳಲ್ಲಿ ಅಥವಾ ಕೃತಕ ವಿಸರ್ಜನ ಟ್ಯಾಂಕರ್‌ಗಳಲ್ಲಿ ವಿಸರ್ಜಿಸತಕ್ಕದ್ದು.

4) ಗಣೇಶ ಚತುರ್ಥಿ ಆಚರಿಸುವ ದೇವಸ್ಥಾನಗಳಲ್ಲಿ ಸ್ಯಾನಿಟೈಸೇಷನ್ ಮಾಡತಕ್ಕದ್ದು.ಸಾರ್ವಜನಿಕ ದರ್ಶನಕ್ಕಾಗಿ ಆಗಮಿಸುವ ಭಕ್ತಾಧಿಗಳಿಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಯನ್ನು ಕಲ್ಪಿಸತಕ್ಕದ್ದು.

5) ದರ್ಶನಕ್ಕಾಗಿ ಬರುವ ಭಕ್ತರಿಗೆ ಕೋವಿಡ್ 19 ಸಮುಚಿತ ವರ್ತನೆಯಂತೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಕನಿಷ್ಠ 6 ಅಡಿ ಸಾಮಾಜಿಕ ಅಂತರವನ್ನು ಪಾಲಿಸುವುದು.

6) ಗಣೇಶೋತ್ಸವ ಆಚರಣೆ ಕಾಲಕ್ಕೆ ಸಂದರ್ಭಕ್ಕನುಗುಣವಾಗಿ ಸರ್ಕಾರ ಜಿಲ್ಲಾಡಳಿತ, ಪೊಲೀಸ್,ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆ ಪ್ರಾಧಿಕಾರಗಳಿಂದ ಹೊರಡಿಸಲಾಗುವ ಎಲ್ಲಾ ಆದೇಶ / ನಿರ್ದೇಶನ ಹಾಗೂ ಸೂಚನೆಗಳನ್ನು ಸಹ ಕಡ್ಡಾಯವಾಗಿ ಪಾಲಿಸತಕ್ಕದ್ದು.


ಮೊಹರಂ ಆಚರಣೆಗೆ ರಾಜ್ಯ ಸರ್ಕಾರದಿಂದ ರೂಪಿಸಿರುವ ಗೈಡ್​​ಲೈನ್ಸ್ ಇಂತಿದೆ: 


1)ಸಾರ್ವಜನಿಕ ಸ್ಥಳಗಳಲ್ಲಿ ಅಲಂಗಳನ್ನು/ಪಂಜಾವನ್ನು ಸ್ಥಾಪಿಸುವುದನ್ನು ಹಾಗೂ ತಾಜಿಯಾವನ್ನು ನಿರ್ಬಂಧಿಸಲಾಗಿದೆ.ಮುಂದುವರಿದು , ದಿನಾಂಕ: 12.08.2021 ರಿಂದ 20.08.2021 ರವರೆಗೆ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ, ಮೊಹರಂ ಪ್ರಾರ್ಥನಾ ಸಭೆ ಮತ್ತು ಮೆರವಣಿಗೆಯನ್ನು ನಿಷೇಧಿಸಲಾಗಿದೆ. ಮೊಹರಂ ಸಂಬಂಧಿತ ಆಚರಣೆಗಳಲ್ಲಿ ಭಾಗವಹಿಸುವ ಭಕ್ತಾದಿಗಳು

ಸೂಕ್ತ ಸಾಮಾಜಿಕ ಅಂತರದೊಂದಿಗೆ ಕನಿಷ್ಠ ಸಂಖ್ಯೆಯಲ್ಲಿ ಭಾಗವಹಿಸುವುದು.

2) ಪಂಜ, ಅಲಂ ಮತ್ತು ತಾಜಿಯತ್‌ಗಳನ್ನು ಸಾರ್ವಜನಿಕರು ಮುಟ್ಟದೆ ದೂರದಿಂದ ನೋಡತಕ್ಕದ್ದು.

3) ಖಬರಸ್ಥಾನ್‌ ಒಳಗೊಂಡಂತೆ ಯಾವುದೇ ಖಾಲಿ ಜಾಗಗಳಲ್ಲಿ ಯಾವುದೇ ತರಹದ ಸಭೆ ಏರ್ಪಡಿಸುವುದನ್ನು ನಿರ್ಬಂಧಿಸಲಾಗಿದೆ. ಖಬರಸಸ್ಥಾನಗಳಿಗೆ ಕೇವಲ ದಫನ ಮಾಡಲು ಮಾತು ಅನುಮತಿ ನೀಡಿದ್ದು, ಮೊಹರಂಗೆ ಸಂಬಂಧಿಸಿದ ಆಚರಣೆಗಳಿಗೆ ಅನುಮತಿ ಇರುವುದಿಲ್ಲ.

4) ಪ್ರಾರ್ಥನಾ ಸ್ಥಳಗಳಲ್ಲಿ ಮುಖ ಗವಸನ್ನು ಕಡ್ಡಾಯವಾಗಿ ಧರಿಸತಕ್ಕದ್ದು.

 5) 60 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಪ್ರಾರ್ಥನೆ ಮಾಡತಕ್ಕದ್ದು.

6) ಕೋವಿಡ್-19 ಸಮುಚಿತ ವರ್ತನೆಗಳೊಂದಿಗೆ, ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಡೆಸತಕ್ಕದ್ದು, ಒಂದು ವೇಳೆ ಹೆಚ್ಚು ಜನರು ಆಗಮಿಸಿದ್ದು, ಎರಡು ಅಥವಾ ಹೆಚ್ಚಿನ ಪಾಳಿಯಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಡೆಸತಕ್ಕದ್ದು.

7) ಕೋವಿಡ್-19 ಸಮುಚಿತ ವರ್ತನೆಯಂತೆ ಮಸೀದಿಗಳಲ್ಲಿ ನಮಾಜ್ ನಿರ್ವಹಿಸುವವರ ಮಧ್ಯ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳತಕ್ಕದ್ದು, ಆಗಾಗ ಕೈಗಳನ್ನು ಸೋಪು ಮತ್ತು ಸಾವಿಟೈಸರ್‌ಗಳಿಂದ ಶುಚಿಗೊಳಿಸಿಕೊಳ್ಳತಕ್ಕದ್ದು, ಮಸೀದಿಗಳಲ್ಲಿ ಪ್ರವೇಶಿಸುವ ಮೊದಲು,ದೇಹದ ತಾಪಮಾನವನ್ನು ತಪಾಸಣೆ ಮಾಡತಕ್ಕದ್ದು.

8) ಭಕ್ತಾದಿಗಳು ಪ್ರವೇಶಿಸುವ ದ್ವಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗುಂಪುಗೂಡುವುದನ್ನು ತಡೆಗಟ್ಟುವುದು. ಆಡಳಿತ ಮಂಡಳಿ/ಮತ್ತು ಆಡಳಿತಾಧಿಕಾರಿ ಇವರು ಭಕ್ತಾದಿಗಳು ಕುಳಿತುಕೊಳ್ಳುವ ಗರಿಷ್ಠ ಸಂಖ್ಯೆಯನ್ನು ಮುಖ್ಯದ್ವಾರದ ಬಳಿ ಪ್ರದರ್ಶಿಸುವುದು.

9) ಮಸೀದಿಗಳಲ್ಲಿ ಪ್ರಾರ್ಥನೆಯಲ್ಲಿ ಭಾಗವಹಿಸುವವರು ತಮ್ಮ ತಮ್ಮ ಮನೆಗಳಿಂದ ಮುಸಲ್ಲಾವನ್ನು (ಜಾಯನಮಾಜ್) ಕಡ್ಡಾಯವಾಗಿ ತರತಕ್ಕದ್ದು, ಪರಸ್ಪರ ಮತ್ತು ಆಲಿಂಗನಗಳನ್ನು ಮಾಡತಕ್ಕದ್ದಲ್ಲ.

10) ಮಸೀದಿಗಳನ್ನು ಹೊರತುಪಡಿಸಿ ಇತರೆ ಯಾವುದೇ ಸಾರ್ವಜನಿಕ ಸ್ಮಳಗಳಲ್ಲಿ ಅಂದರೆ, ಸಭಾಂಗಣ ಸಮುದಾಯ ಭವನ, ಶಾದಿ ಮಹಲ್ ಮತ್ತಿತರ ತರದ ಜಾಗಗಳಲ್ಲಿ ಮೊಹರಂ ಹಬ್ಬದ ವುಯುಕ್ತ ಸಾಮೂಹಿಕ ಪ್ರಾರ್ಥನೆಯನ್ನು ಆಯೋಜಿಸುವಂತಿಲ್ಲ.

11) ಮೊಹರಂ ಪ್ರಯುಕ್ತ ಯಾವುದೇ ರೀತಿಯ ಮೆರವಣಿಗೆ / ಸಾರ್ವಜನಿಕ ಸ್ಥಳಗಳಲ್ಲಿ ಭಾಷಣ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ.

12) ಭಕ್ತಾದಿಗಳು ಯಾವ ಯಾವ ಕೆಲಸವನ್ನು ನಿರ್ವಹಿಸುವುದು ಯಾವ ಯಾವ ಕೆಲಸವನ್ನು ನಿರ್ವಹಿಸಬಾರದು ಎಂಬ ಬಗ್ಗೆ ಧ್ವನಿ ವರ್ಧಕದ ಮೂಲಕ ಸೂಚಿಸುವುದು.

Leave a Comment