ಕನ್ನಡ ಸಿನಿಮಾ ರಂಗದ ಹೆಸರಾಂತ ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಮದುವೆ ನಾಳೆ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಡೆಯಲಿದೆ. ಮದುವೆಗಾಗಿ ಈಗಾಗಲೇ ಸಿದ್ಧತೆ ನಡೆದಿದ್ದು, ಎರಡೂ ಕುಟುಂಬದ ಸದಸ್ಯರು ಈಗಾಗಲೇ ಆಶ್ರಮದಲ್ಲಿ ಬೀಡುಬಿಟ್ಟಿದ್ದಾರೆ. ನಾಳೆ ನಡೆಯಲಿರುವ ಮದುವೆ ಮುಹೂರ್ತದಲ್ಲಿ ಡಾಲಿ ಧನಂಜಯ್, ಪ್ರಮೋದ್ ಶೆಟ್ಟಿ, ರಿಷಬ್ ಶೆಟ್ಟಿ, ಸತೀಶ್ ನೀನಾಸಂ ಸೇರಿದಂತೆ ಅನೇಕ ಕಲಾವಿದರು ಭಾಗಿಯಾಗಲಿದ್ದಾರೆ.
ಸಾಂಪ್ರದಾಯಿಕವಾಗಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ತಮ್ಮ ನೆಚ್ಚಿನ ಆಶ್ರಮದಲ್ಲೇ ಮದುವೆಯಾಗಬೇಕು ಎನ್ನುವುದು ಅವರ ಕನಸಾಗಿತ್ತು. ಅಲ್ಲದೇ, ವಸಿಷ್ಠ ಮೂಲತಃ ಮೈಸೂರಿನವರೇ ಆಗಿರುವುದರಿಂದ ಸಚ್ಚಿದಾನಂದ ಆಶ್ರಮವನ್ನು ಆಯ್ಕೆ ಮಾಡಿಕೊಂಡಿದೆ ಜೋಡಿ. ನಾಳೆ ಬೆಳಗ್ಗೆ ಅದ್ಧೂರಿಯಾಗಿಯೇ ಈ ಜೋಡಿ ಹೊಸ
ಜೀವನಕ್ಕೆ ಕಾಲಿಡಲಿದೆ.
ಕುಟುಂಬಸ್ಥರು ಮತ್ತು ಕೆಲವೇ ಆಪ್ತರಿಗೆ ನಾಳೆ ಆಹ್ವಾನ ನೀಡಿದ್ದು, ಜನವರಿ 28ರಂದು ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇಂದು ಉದ್ಯಮದ ಬಹುತೇಕ ಗಣ್ಯರಿಗೆ ಆಹ್ವಾನ ಹೋಗಿದೆ. ಅಲ್ಲದೇ, ತಮಿಳು ಮತ್ತು ತೆಲುಗು ಚಿತ್ರರಂಗದಿಂದಲೂ ಕೆಲ ಕಲಾವಿದರು ಮತ್ತು ತಂತ್ರಜ್ಞರು ಆಗಮಿಸಲಿದ್ದಾರೆ.














