ಬೆಂಗಳೂರು:ನಗರದ ಪಶ್ಚಿಮ ವಿಭಾಗದ ಪೊಲೀಸರು ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಎಂ.ಪಾಟೀಲ್ ಅವರ ನೇತ್ರತ್ವದಲ್ಲಿ ಉಪ್ಪಾರಪೇಟೆಯಲ್ಲಿರುವ 'ಲಯನ್ಸ್ ರಕ್ತ ನಿಧಿ' ಇವರ ಸಹಯೋಗದಲ್ಲಿ ನಡೆದ ರಕ್ತ ದಾನ ಶಿಬಿರದಲ್ಲಿ ವಿಭಾಗದ ಹಲವು ಠಾಣೆಗಳ ಇನ್ಸ್ಪೆಕ್ಟರ್, ಪಿಎಸ್ಐ, ಎಎಸ್ಐ, ಹೆಡ್ಕಾನ್ಸ್ಟೆಬಲ್ ಹಾಗೂ ಕಾನ್ಸ್ಟೆಬಲ್ ಸೇರಿದಂತೆ ಒಟ್ಟು ನೂರಕ್ಕೂ ಅಧಿಕ ಮಂದಿ ಪೋಲಿಸರು ಸ್ವಯಂ ಪ್ರೇರಿತ ರಕ್ತದಾನ ಮಾಡಿದ್ದಾರೆ.
ಕಿದ್ವಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಪೀಡಿತ
ಹಲವು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ರಕ್ತದ ಅವಶ್ಯಕತೆಯಿದ್ದು, ರಕ್ತದಾನ ಮಾಡುವಂತೆ ಆಸ್ಪತ್ರೆಯವರು ಕೋರಿದ್ದರು. ಇದಕ್ಕೆ ಸ್ಪಂದಿಸಿದ ಪಶ್ಚಿಮ ವಿಭಾಗದ ಪೊಲೀಸರು, ಕೆಲಸದ ಒತ್ತಡದ ನಡುವೆಯೂ ರಕ್ತದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.
ಇವರ ಕಾರ್ಯಕ್ಕೆ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಭಾಗವಾಗಿ ಈ ಶಿಬಿರ ಆಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.















