ಜೋಯಾಲುಕ್ಕಾಸ್‌ಗೆ ಸೇರಿದ 305.84 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿರುವುದಾಗಿ ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ಹೇಳಿದೆ. ಜನಪ್ರಿಯ ಆಭರಣ ತಯಾರಿಕಾ ಮತ್ತು ಮಾರಾಟ ಸಂಸ್ಥೆಯ ಐದು ಆವರಣಗಳ ಮೇಲೆ ಇ.ಡಿ ಅಧಿಕಾರಿಗಳು ಇತ್ತೀಚೆಗೆ ದಾಳಿ ನಡೆಸಿದ್ದರು. ಆಭರಣ ಸರಪಳಿಯು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂದು ಇ.ಡಿ ಆರೋಪಿಸಿದೆ.
ಈ ಪ್ರಕರಣವು ಹವಾಲಾ ಮಾರ್ಗದ ಮೂಲಕ ಭಾರತದಿಂದ ದುಬೈಗೆ ಭಾರಿ ಮೊತ್ತದ ಹಣವನ್ನು ವರ್ಗಾಯಿಸಿದ್ದಕ್ಕೆ ಸಂಬಂಧಿಸಿದೆ. ಹವಾಲಾ ಮೂಲಕ ಹಣ ವರ್ಗಾವಣೆ ಮಾಡಿ ಜಾಯ್ ಅಲುಕ್ಕಾಸ್ ವರ್ಗೀಸ್ ಅವರ ಸಂಪೂರ್ಣ ಒಡೆತನದಲ್ಲಿರುವ ದುಬೈನ ಜೋಯಾಲುಕ್ಕಾಸ್ ಜ್ಯುವೆಲ್ಲರಿ ಎಲ್‌ಎಲ್‌ಸಿಯಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ಮಂಗಳವಾರ ಕಂಪನಿಯು ತನ್ನ 2,300 ಕೋಟಿ ಆರಂಭಿಕ ಸಾರ್ವಜನಿಕ ಷೇರು ಕೊಡುಗೆ ಅಥವಾ ಐಪಿಒವನ್ನು ಹಿಂತೆಗೆದುಕೊಂಡ ಬೆನ್ನಲ್ಲೇ ಈ ಬೆಳವಣಿಗೆ ವರದಿಯಾಗಿದೆ. ಐಪಿಒ ರದ್ದಿನ ವೇಳೆ ಹಣಕಾಸಿನ ಫಲಿತಾಂಶಗಳಲ್ಲಿ ಗಣನೀಯ ಬದಲಾವಣೆಗಳನ್ನು ಮಾಡಲು ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಜೋಯಾಲುಕ್ಕಾಸ್ ಹೇಳಿತ್ತು.
ವಶಪಡಿಸಿಕೊಂಡಿರುವ ಆಸ್ತಿಗಳಲ್ಲಿ ಕೇರಳದ ತ್ರಿಶೂರ್‌ನ ಶೋಭಾ ನಗರದಲ್ಲಿರುವ ನಿವೇಶನ ಮತ್ತು ವಸತಿ ಕಟ್ಟಡ ಒಳಗೊಂಡ 81.54 ಕೋಟಿ ರೂ. ಮೌಲ್ಯದ 33 ಸ್ಥಿರ ಆಸ್ತಿಗಳು ಸೇರಿವೆ. 91.22 ಲಕ್ಷ ಮೌಲ್ಯದ ಮೂರು ಬ್ಯಾಂಕ್ ಖಾತೆಗಳು, 5.58 ಕೋಟಿ ರೂ. ಮೊತ್ತದ ಮೂರು ಸ್ಥಿರ ಠೇವಣಿಗಳು ಮತ್ತು 217.81 ಕೋಟಿ ರೂ. ಮೌಲ್ಯದ ಜೋಯಾಲುಕ್ಕಾಸ್ ಷೇರುಗಳನ್ನು ಸಹ ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.