ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯವು ಭೂತಾನ್‌ನಿಂದ ಪ್ರತಿ ವರ್ಷ 17,000 ಟನ್ ತಾಜಾ ಅಡಿಕೆ ಅಮದು ಮಾಡಿಕೊಳ್ಳಲು ಒಪ್ಪಿಗೆ ನೀಡಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಅಡಿಕೆ ಬೆಲೆ ಕುಸಿಯಬಹುದು ಎಂಬ ತಳಮಳ ಬೆಳೆಗಾರರಲ್ಲಿ ಶುರುವಾಗಿದೆ.
ಯಾವುದೇ ಒಪ್ಪಂದ ಇಲ್ಲದಿದ್ದರೂ ಸಹ ಶ್ರೀಲಂಕಾ, ಮ್ಯಾನ್ಮಾರ್ ಹಾಗೂ ಇಂಡೋನೇಷ್ಯಾದಿಂದ ಈಗಾಗಲೇ ಅಡಿಕೆ ಅಮದಾಗುತ್ತಿದ್ದು, ಇದರ ಜೊತೆಗೆ ಈಗ ಭೂತಾನ್‌ನಿಂದಲೂ ಅಡಿಕೆ ಆಮದು ಮಾಡಿಕೊಂಡರೆ ಇದು ಬೆಲೆಯ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ
ಬೆಳೆಗಾರರದ್ದಾಗಿದೆ.
ದೇಶದಲ್ಲಿ ಅಡಿಕೆ ಉತ್ಪಾದನೆಯ ಶೇಕಡಾ ೩೫ಕ್ಕೂ ಹೆಚ್ಚು ಪ್ರಮಾಣ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿದ್ದು, ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ, ತುಮಕೂರು, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಹಾವೇರಿ ಜಿಲ್ಲೆಗಳು ಅತಿ ಹೆಚ್ಚು ಅಡಿಕೆ ಬೆಳೆಯುವ ಪ್ರದೇಶಗಳಾಗಿವೆ.















