Coastal Bulletin

ಮೈಸೂರು : ಸಾಂಸ್ಕೃತಿಕ ಸಿರಿ ಮತ್ತು ಧಾರ್ವಿುಕ ಐಸಿರಿಯ ಸಮ್ಮಿಲನವಾದ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವವೊಂದು ಸುಂದರ ದೃಶ್ಯಕಾವ್ಯ. ವರ್ಷಕ್ಕೊಮ್ಮೆ ಬರುವ ಈ ರಮಣೀಯ ಘಳಿಗೆಗೆ ಸಾಂಸ್ಕೃತಿಕ ನಗರಿ ಮದುವಣಗಿತ್ತಿಯಂತೆ ಸಿಂಗಾರಗೊಂಡು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕೋವಿಡ್ ಸಂಕ್ರಮಣದಿಂದ ಕಳೆದ 2 ವರ್ಷ ಸರಳವಾಗಿ ನಡೆದಿದ್ದ ಉತ್ಸವದಲ್ಲಿ ಈ ಬಾರಿ ಸಡಗರ ಮೇಳೈಸಲಿದೆ. ಸೆ. 26ರಂದು ನಾಡಹಬ್ಬದ ಅಂಕದ ಪರದೆ ಗರಿ ಬಿಚ್ಚಲಿದೆ.

ಮೊದಲ ಬಾರಿಗೆ ರಾಷ್ಟ್ರಪತಿಯಿಂದ ಚಾಲನೆ: ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ ದಸರೆಗೆ ಸೆ.26ರಂದು ಬೆಳಗ್ಗೆ 9.45ರಿಂದ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ರಾಷ್ಟ್ರಪತಿ ದ್ರೌಪದಿ ಮುಮು ವಿಧ್ಯುಕ್ತವಾಗಿ ಚಾಲನೆ ನೀಡಿ ಮುನ್ನುಡಿ ಬರೆಯಲಿದ್ದಾರೆ. ದೇಶದ ಪ್ರಥಮ ಪ್ರಜೆಯಿಂದ ಉದ್ಘಾಟನೆ ಆಗುತ್ತಿರುವುದು ಇದೇ ಮೊದಲು. ಬಳಿಕ ಸಾಲು ಸಾಲು ದಸರಾ ಚಟುವಟಿಕೆಗಳು ಅನಾವರಣಗೊಳ್ಳಲಿದ್ದು, 10 ದಿನಗಳ ಕಾಲ ಹಬ್ಬದ ನವೋಲ್ಲಾಸ ಕಳೆಗಟ್ಟಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ ಹಿರಿಮೆ: ದಸರಾದ ವೈಶಿಷ್ಟ್ಯಾದ ಸಾಂಸ್ಕೃತಿಕ ಕಾರ್ಯಕ್ರಮ ಅರಮನೆ ಅಂಗಳದಲ್ಲಿ ನಿತ್ಯ ಸಂಜೆ ಗರಿಗೆದರಲಿದೆ. ಕಲಾವಿದರು 290 ವಿವಿಧ ಬಗೆಯ ಕಾರ್ಯಕ್ರಮಗಳನ್ನು ಉಣಬಡಿಸಲಿದ್ದಾರೆ. ಜಗನ್ಮೋಹನ ಅರಮನೆ, ಕಲಾಮಂದಿರ, ಗಾನಭಾರತಿ, ನಾದಬ್ರಹ್ಮ, ಕಿರುರಂಗಮಂದಿರ, ಚಿಕ್ಕಗಡಿಯಾರ ಹಾಗೂ ಪುರಭವನ ವೇದಿಕೆಯಲ್ಲೂ ವಿಶಿಷ್ಟ ಕಾರ್ಯಕ್ರಮಗಳು ನಡೆಯಲಿವೆ. ದೇಸಿ ಕಲಾಸಂಸ್ಕೃತಿ ನೋಡಲು ಸಿಗಲಿದೆ.

ಯುವ ದಸರಾದಲ್ಲಿ ಮಂಗ್ಲಿ ಮಿಂಚು: ಯುವ ಮನಸ್ಸುಗಳನ್ನು ಹುಚ್ಚೆದ್ದು ಕುಣಿಸುವ 'ಯುವ ದಸರಾ' ಸೆ.27ರಿಂದ ಏಳು ದಿನಗಳ ಕಾಲ ವರ್ಣರಂಜಿತವಾಗಿ ನಡೆಯಲಿದೆ. ತೆಲುಗಿನ ಜನಪ್ರಿಯ ಗಾಯಕಿ ಮಂಗ್ಲಿ, ಬಾಲಿವುಡ್ ಗಾಯಕರಾದ ಕನ್ನಿಕಾ ಕಪೂರ್, ಅಮಿತ್ ತ್ರಿವೇದಿ ಮತ್ತು ಸುನಿಧಿ ಚೌಹಾಣ್ ಸಂಗೀತದ ಧೂಳೆಬ್ಬಿಸಲಿದ್ದಾರೆ. ಗಾಯಕ ರಾದ ರಘು ದೀಕ್ಷಿತ್, ಡಾ.ಶಮಿತಾ ಮಲ್ನಾಡ್ ಸಹ ಮೋಡಿ ಮಾಡಲಿದ್ದಾರೆ.

ಕುಸ್ತಿಗೆ 'ಸಾಕ್ಷಿ': ಕುಸ್ತಿ ಕಾಳಗಕ್ಕೆ ಈ ಬಾರಿ ಖ್ಯಾತ ಕುಸ್ತಿಪಟು ಸಾಕ್ಷಿ ಮಲ್ಲಿಕ್ ವಿಶೇಷ ಆಹ್ವಾನಿತರಾಗಿದ್ದು, ಪಂಜಕುಸ್ತಿ ಟೂರ್ನಿಯೂ ಇದೆ.

ಬಿಗಿ ಭದ್ರತೆ: ದಸರೆಗೆ ಖಾಕಿ ಸರ್ಪಗಾವಲು ಹಾಕಲಾಗಿದೆ. 5,485 ಪೊಲೀಸರನ್ನು ಬಂದೋಬಸ್ತ್​ಗೆ ನಿಯೋಜಿಸಲಾಗಿದೆ. ಜತೆಗೆ, ಸಿಸಿಟಿವಿ ಕ್ಯಾಮರಾ, ಡ್ರೋನ್ ಕ್ಯಾಮರಾ, ಬಾಡಿ ವೋರ್ನ್ ಕ್ಯಾಮರಾ ಮೂಲಕವೂ ಕಣ್ಗಾವಲು ಇಡಲಾಗಿದೆ.

ದಸರೆಯಲ್ಲೂ ಅಪ್ಪು ಜೀವಂತ: ಪುನೀತ್ ರಾಜ್​ಕುಮಾರ್​ಗೆ ದಸರೆಯಲ್ಲಿ ವಿಶೇಷ ನಮನ ಸಲ್ಲಿಸಲಾಗುತ್ತಿದೆ. ಚಲನಚಿತ್ರೋತ್ಸವದಲ್ಲೂ 'ಅಪ್ಪು ದಿನ' ಆಚರಿಸಲಾಗುತ್ತಿದೆ. ಅವರ ಆರು ಸಿನಿಮಾಗಳನ್ನು

ತೋರಿಸಲಾಗುತ್ತಿದೆ. ದೀಪಾಲಂಕಾರದಲ್ಲಿ ಪವರ್​ಸ್ಟಾರ್​ಗೆ ಬೆಳಕಿನ ರೂಪಕ ನೀಡಿದ್ದರೆ, ಫಲಪುಷ್ಪ ಪ್ರದರ್ಶನದಲ್ಲೂ 'ಯುವರತ್ನ'ನಿಗೆ ಹೂವಿನ ಸಿಂಗಾರ ಮಾಡಲಾಗಿದೆ.

ಅರಮನೆಯಲ್ಲೂ ಸಡಗರ: ಖಾಸಗಿ ದಸರಾಕ್ಕೂ ಅರಮನೆ ಸಿದ್ಧವಾಗಿದೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ 9ನೇ ಬಾರಿಗೆ ಖಾಸಗಿ ದರ್ಬಾರ್ ಮುನ್ನಡೆಸುವರು. ಆಳರಸರ ಗತಕಾಲದ ವೈಭವವೂ ಗರಿಗೆದರಲಿದೆ.

ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ದ್ರೌಪದಿ ಮುಮು ಕರ್ನಾಟಕಕ್ಕೆ ಮೊದಲ ಬಾರಿಗೆ ಆಗಮಿಸು ತ್ತಿದ್ದು, ದೇಶದ ಮೊದಲ ರಾಜ್ಯವೂ ಹೌದು. ಚಾಮುಂಡಿಬೆಟ್ಟದಲ್ಲಿ ಅಧಿದೇವತೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ ಪೂಜೆ ಸಲ್ಲಿಸಿದ ನಂತರ ನಾಡಹಬ್ಬ ದಸರಾ ಉದ್ಘಾಟಿಸಲಿದ್ದಾರೆ. ಮೂರು ದಿನ (ಸೆ.26 ರಿಂದ 28)ಗಳ ರಾಜ್ಯದಲ್ಲೇ ಇರಲಿದ್ದು, ಮೈಸೂರಿನ ಕಾರ್ಯಕ್ರಮದ ನಂತರ ನೇರವಾಗಿ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಲಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನಗರದ ದೇಶಪಾಂಡೆ ನಗರ ಕೆಜಿಎ ಮೈದಾನದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪೌರಸನ್ಮಾನ ಸ್ವೀಕರಿಸುವರು.

ದಸರಾ ಮಹೋತ್ಸವಕ್ಕೆ ಸೋಮವಾರ ಚಾಲನೆ ದೊರೆಯಲಿರುವ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದಲ್ಲಿ ಭಾನುವಾರ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಸಜ್ಜುಗೊಳಿಸಲಾಯಿತು. ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಇದ್ದಾರೆ.

ನಂತರ ಧಾರವಾಡದಲ್ಲಿ ಹೊಸದಾಗಿ ನಿರ್ವಿುತ ಭಾರತೀಯ ಮಾಹಿತಿ ಮತ್ತು ತಂತ್ರಜ್ಞಾನ ಸಂಸ್ಥೆ ಕ್ಯಾಂಪಸ್ ಲೋಕಾರ್ಪಣೆ ಮಾಡಲಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಬೆಳಗ್ಗೆ ಎಚ್​ಎಎಲ್​ನಲ್ಲಿ ಸಂಯೋಜಿತ ಕ್ರಯೋಜೆನಿಕ್ ಇಂಜಿನ್ ತಯಾರಿಕಾ ಸೌಲಭ್ಯ ಚಾಲನೆ ನೀಡಲಿದ್ದಾರೆ. ಆನ್​ಲೈನ್ ವೇದಿಕೆ ಮೂಲಕ ದಕ್ಷಿಣ ವಲಯ ವೈರಾಲಜಿ ಸಂಸ್ಥೆಗೆ ಶಿಲಾನ್ಯಾಸ ನೆರವೇರಿಸುವರು. ಅದೇ ದಿನ ಸಂಜೆ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ರಾತ್ರಿ 7ಕ್ಕೆ ವಿಧಾನಸೌಧ ಬ್ಯಾಂಕ್ವೆಟ್ ಹಾಲ್​ನಲ್ಲಿ ರಾಜ್ಯ ಸರ್ಕಾರ ಏರ್ಪಡಿಸಿರುವ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮುಮು ಅವರು ಮಂಗಳವಾರ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದು, ಬುಧವಾರ ದೆಹಲಿ ಪ್ರಯಾಣ ಬೆಳೆಸಲಿದ್ದಾರೆ ಎಂದು ರಾಷ್ಟ್ರಪತಿ ಭವನದ ಮೂಲಗಳು ಮಾಹಿತಿ ನೀಡಿವೆ.

Leave a Comment