ಭುವನೇಶ್ವರ: ಒಡಿಶಾದ (Odisha) ಪುರಿ ಜಗನ್ನಾಥ ರಥಯಾತ್ರೆ (Puri Jagannath Rath Yatra) ವೇಳೆ ಕಾಲ್ತುಳಿತ (Stampede) ಉಂಟಾಗಿ ಮೂವರು ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ.
ಜಗನ್ನಾಥ ದೇವಾಲಯದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಗುಂಡಿಚಾ ದೇವಾಲಯದ ಬಳಿ ಕಾಲ್ತುಳಿತ ಉಂಟಾಗಿದೆ. ಘಟನೆಯಲ್ಲಿ ಇಬ್ಬರು ಮಹಿಳೆಯರು ಸೇರಿ ಮೂವರು ಮೃತಪಟ್ಟಿದ್ದಾರೆ. ಮೃತರನ್ನು ಪ್ರಭಾತಿ ದಾಸ್, ಬಸಂತಿ ಸಾಹು ಹಾಗೂ ಪ್ರೇಮಕಾಂತ್ ಮೊಹಂತಿ (70) ಎಂದು ಗುರುತಿಸಲಾಗಿದೆ. ಮೂವರೂ ಒಡಿಶಾದ ಖುರ್ದಾ ಜಿಲ್ಲೆಯವರಾಗಿದ್ದು, ರಥಯಾತ್ರೆಗಾಗಿ
ಪುರಿಗೆ ಬಂದಿದ್ದರು ಎಂದು ತಿಳಿದುಬಂದಿದೆ. ಇನ್ನು ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳು ತಿಳಿಸಿವೆ.
ಇಂದು ಮುಂಜಾನೆ 4:30ರ ವೇಳೆಗೆ ಘಟನೆ ನಡೆದಿದೆ. ಗುಂಡಿಚಾ ದೇವಾಲಯದ ಬಳಿ ರಥಯಾತ್ರೆಯನ್ನು ಕಣ್ತುಂಬಿಕೊಳ್ಳಲು ಭಕ್ತ ಸಮೂಹವೇ ಸೇರಿತ್ತು. ರಥಗಳು ಭಕ್ತರನ್ನು ಸಮೀಪಿಸುತ್ತಿದ್ದಂತೆ ಜನಸಂದಣಿ ಹೆಚ್ಚಾಗಿ ಕಾಲ್ತುಳಿತ ಉಂಟಾಗಿದೆ.