ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕುವುನಿಂದ ದಾಳಿ ಮಾಡಲಾಗಿದೆ. ಶ್ರೀಮಂತ ನಟ ಎಂಬ ಕಾರಣಕ್ಕೆ ಕೆಲವರು ಅವರ ಮನೆಗೆ ಕನ್ನ ಹಾಕಲು ಪ್ರಯತ್ನಿಸಿದ್ದಾರೆ. ಈ ವೇಳೆ ಸೈಫ್ ಅಲಿ ಖಾನ್ ಅವರು ತಡೆಯಲು ಪ್ರಯತ್ನಿಸಿದ್ದಾರೆ. ಆಗ ಅವರಿಗೆ ಗಾಯ ಆಗಿದೆ. ಅವರನ್ನು ಸದ್ಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಸೈಫ್ ಅಲಿ ಖಾನ್ ಅವರು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಮನೆಯಲ್ಲಿ ಕುಟುಂಬದವರ ಜೊತೆ ಮಲಗಿದ್ದರು. ಇಂದು (ಜನವರಿ 16) ಮುಂಜಾನೆ 2.30ರ ವೇಳೆಗೆ ಕಳ್ಳರು ಮನೆ ಒಳಗೆ ನುಗ್ಗಿದ್ದಾರೆ. ಈ ವೇಳೆ ಎಲ್ಲರಿಗೂ ಎಚ್ಚರ ಆಗಿದೆ. ಆಗ ಸೈಫ್ ಮೇಲೆ ಅವರು ಹಲ್ಲೆ ಮಾಡಿದ್ದಾರೆ. ತಕ್ಷಣ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಸದ್ಯ ದರೋಡೆಕೋರರನ್ನು ಹಿಡಿಯುವ ಪ್ರಯತ್ನ ನಡೆಯುತ್ತಿದೆ.
ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ವಿಶೇಷ ಪೊಲೀಸರ ತಂಡ ರಚನೆ ಆಗಿದೆ. ಮನೆ ಹಾಗೂ ಸುತ್ತಮುತ್ತ ಇರುವ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಮಾಡಲಾಗುತ್ತಿದೆ. ಸದ್ಯ ಸೈಫ್ ಅಲಿ ಖಾನ್ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲು
ಮಾಡಲಾಗಿದೆ.
ಘಟನೆ ಬಗ್ಗೆ ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ‘ಕಳ್ಳರು 2-3 ಬಾರಿ ಹಲ್ಲೆ ಮಾಡಿದ್ದಾರೆ. ನಾವು ಇದನ್ನು ತನಿಖೆ ನಡೆಸುತ್ತಿದ್ದೇವೆ. ಮುಂಬೈ ಕ್ರೈಮ್ ಬ್ರ್ಯಾಂಚ್ ಕೂಡ ತನಿಖೆ ನಡೆಸುತ್ತಿದೆ. ಮುಂಜಾನೆ 3 ಗಂಟೆಗೆ ಸೈಫ್ ಅವರನ್ನು ಲೀವಾತಿ ಆಸ್ಪತ್ರೆಗೆ ಕರೆತರಲಾಗಿದೆ. ಅವರಿಗೆ ಆರು ಗಾಯಗಳಾಗುದ್ದು, ಎರಡು ಕಡೆ ತುಂಬಾನೇ ಗಂಭೀರ ಗಾಯವಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆನ್ನಿನ ಭಾಗದಲ್ಲಿ ಕಳ್ಳರು ಇರಿದ ಚಾಕು ತುಂಬಾನೇ ದೊಡ್ಡ ಗಾಯವನ್ನೇ ಮಾಡಿದೆ ಎನ್ನಲಾಗಿದೆ. ಬೆನ್ನಿನ ಮೂಳೆಗೆ ತೊಂದರೆ ಆಗಿದೆಯೇ ಎನ್ನುವ ಬಗ್ಗೆ ಪರೀಕ್ಷೆ ನಡೆಯುತ್ತಿದೆ. ಸದ್ಯ ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯ ಇದೆ ಎನ್ನಲಾಗಿದೆ.