ಮುಂಬೈ: ಇಲ್ಲಿನ ಪುಣೆ ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೂರೂವರೆ ವರ್ಷದ ಮಗು ಸೇರಿ ದಂಪತಿ ಸಾವಿಗೀಡಾದ ದಾರುಣ ಘಟನೆ ರಾಯಗಢ ಜಿಲ್ಲೆಯ ಬೋರ್ಗಾಟ್ ನಲ್ಲಿ ನಡೆದಿದೆ.ಕಾರಿನಲ್ಲಿದ್ದ ಜೋಕಿಂ ಚೆಟ್ಟಿಯಾರ್(36), ಪತ್ನಿ ಲೂಸಿಯಾ(35), ಮತ್ತು ಇವರ ಮಗ ಮೂರುವರೆ ವರ್ಷದ ಜೈಸನ್ ಸ್ಥಳದಲ್ಲೇ ಮೃತಪಟ್ಟ ದುರ್ದೈವಿಗಳು.
ಜೋಕಿಂ ಕುಟುಂಬದೊಂದಿಗೆ ಪುಣೆಯಲ್ಲಿ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿ ತಮ್ಮ ಮನೆ ವಸಾಯಿ ಬಳಿಯ ನೈಗಾಂವ್ ಗೆ ಐಟ್ವೆಂಟಿ ಕಾರಿನಲ್ಲಿ ತೆರಳುತ್ತಿದ್ದರು. ಹೆದ್ದಾರಿಯಲ್ಲಿ ಬರುತ್ತಿದ್ದಾಗ ಬೋರ್ಗಾಟ್ ಏರಿಯಾದಲ್ಲಿ ಕ್ರಾಸ್ ಮಾಡಿಕೊಂಡು ಮತ್ತೊಂದು ಕಡೆಗೆ ತೆರಳಲು ನಿಂತಿದ್ದರು. ಕಾರನ್ನು ಕ್ರಾಸ್ ಮಾಡಲೆಂದು ಮುಂದಕ್ಕೆ ಚಲಿಸುತ್ತಿದ್ದಾಗ ಇನ್ನೊಂದು ಕಡೆಯಿಂದ ಬಂದ ಕಂಟೇನರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಅಲ್ಲಿದ್ದ ಮತ್ತೊಂದು ಟ್ರಕ್ಕಿಗೆ
ಡಿಕ್ಕಿಯಾಗಿದೆ. ಟ್ರಕ್ಕಿಗೆ ಬಡಿದ ರಭಸಕ್ಕೆ ಟ್ರಕ್ ಮುಂದಕ್ಕೆ ಬಂದಿದ್ದು ಜೋಕಿಂ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿಯಾಗಿದೆ.ಡಿಕ್ಕಿಯಾದ ರಭಸಕ್ಕೆ ಕಾರು ರಸ್ತೆಯಲ್ಲೇ ಪಲ್ಟಿ ಹೊಡೆದಿದ್ದು ಕೆಲವೇ ಕ್ಷಣದಲ್ಲಿ ಬೆಂಕಿ ಹತ್ತಿಕೊಂಡಿದೆ.ಕಾರಿನಲ್ಲಿದ್ದ ಮೂವರಿಗೆ ಹೊರಗೆ ಬರಲಾಗದೆ ಜೀವಂತ ದಹನವಾಗಿದ್ದಾರೆ.
ಕಂಟೇನರ್ ಲಾರಿಯ ಚಾಲಕ ರಮೇಶ್ ನಿಕಮ್ ನ ವಿರುದ್ಧ ನಿರ್ಲಕ್ಷದ ಚಾಲನೆಯ ಆಧಾರದಲ್ಲಿ ಪ್ರಕರಣ ದಾಖಲಿಸಿದ್ದಾರೆ.
















