Coastal Bulletin

ಮಂಗಳೂರು : ತಂಗಿಗೆ ಕೀಟಲೆ ಮಾಡಿದನೆಂಬ ಕಾರಣಕ್ಕೆ ಅಣ್ಣ ಮತ್ತು ಆತನ ಸ್ನೇಹಿತರು ಸೇರಿ ಹಲ್ಲೆ ನಡೆಸಿ, ಚೂರಿಯಿಂದ ಇರಿದು ಪರಾರಿಯಾದ ಘಟನೆ ಕೊಳ್ನಾಡು ಗ್ರಾಮದ ಕಾಡುಮಠ ದಲ್ಲಿ ನಡೆದಿದ್ದು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಡುಮಠ ನಿವಾಸಿ ಅಬ್ದುಲ್ ಹ್ಯಾರಿಸ್ (29) ಗಾಯಗೊಂಡಿದ್ದು, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾನೆ.

ಅಬ್ದುಲ್ ಹ್ಯಾರಿಸ್  ಸಾಲೆತ್ತೂರಿನಿಂದ ತನ್ನ ಮನೆಗೆ ಬೈಕ್ ನಲ್ಲಿ ಬರುತ್ತಿದ್ದಾಗ ಹಿಂದಿನಿಂದ ಬಂದ ಅವಿನಾಶ್, ವಿನೀತ್, ದಿನೇಶ್ ಮತ್ತು ಮತ್ತೊಬ್ಬ ಅಪರಿಚಿತ ವ್ಯಕ್ತಿ ಸೇರಿಕೊಂಡು ಹಾರೀಸ್  ದ್ವಿಚಕ್ರ ವಾಹನವನ್ನು ನಿಲ್ಲಿಸಿ ಕೈಯಿಂದ ಹೊಡೆದು, ಬೈಕಿನಿಂದ ದೂಡಿಹಾಕಿದ್ದು, ಬಳಿಕ ಅವಿನಾಶ್ ಚೂರಿಯಿಂದ ಹಾರೀಸ್  ಬೆನ್ನಿಗೆ ಇರಿದಿದ್ದಾನೆನ್ನಲಾಗಿದೆ. ಬಳಿಕ

ನೀನು ನಮ್ಮ ತಂಟೆಗೆ ಬಂದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ತೆರಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕೆಲ ಸಮಯದ ಹಿಂದೆ ಅವಿನಾಶನ ತಂಗಿಗೆ ಕೀಟಲೆ ಮಾಡಿದ್ದಾನೆ ಎಂದು ಹಾರೀಸ್ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಪೂರ್ವ ದ್ವೇಷದಿಂದ ಈ ಹಲ್ಲೆ ನಡೆದಿದೆ ಎನ್ನಲಾಗಿದೆ.ಘಟನೆ  ಸಂಬಂಧ ವಿಟ್ಲ  ಪೊಲೀಸರು ನಾಲ್ವರ ಮೇಲೆ‌ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Comment