Coastal Bulletin

ಮೂಡುಬಿದಿರೆ: ಹುಟ್ಟುವಾಗಲೇ ಭುಜದಿಂದ ಎರಡೂ ಕೈಗಳಿಲ್ಲ ಎಂಬ ಆಘಾತದ ನಡುವೆಯೂ ಆತ್ಮವಿಶ್ವಾಸದಿಂದ ಬದುಕು ಕಟ್ಟಿಕೊಂಡು ಶೈಕ್ಷಣಿಕವಾಗಿ ಉನ್ನತ ಸಾಧನೆಯ ಜತೆಗೆ ಬದುಕಿನಲ್ಲೂ ಅಂಗವೈಕಲ್ಯದ ಕೊರತೆ ಕಾಡದಂತೆ ಸಾಧಕಿಯಾಗಿ ಬೆಳೆದವರು ಬೆಳ್ತಂಗಡಿ ಮೂಲದ ಸಬಿತಾ ಮೋನಿಸ್.

ಪ್ರಸ್ತುತ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾಗಿರುವ ಸಬಿತಾ ಕಾಲನ್ನೇ ಕೈಯನ್ನಾಗಿಸಿ ಅಕ್ಷರದ ಜತೆಗೆ ಸ್ವಾಭಿಮಾನದ ಬದುಕನ್ನೂ ಅರಿತುಕೊಂಡವರು. ಏಳನೇ ತರಗತಿಯಲ್ಲೇ ಶೇ 82, ಎಸ್ಸೆಸ್ಸೆಲ್ಸಿ (ಶೇ 71) ಪಿಯುಸಿ (ಶೇ 81) ಬಿ.ಎ ( ಶೇ 67) ಎಂ.ಎಸ್.ಡಬ್ಲ್ಯು  ( ಶೇ 67), ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಪಿಜಿ ಡಿಪ್ಲೊಮಾ, ಸೋಶಿಯಾಲಜಿ ಎಂ.ಎ ಪ್ರಥಮ ದರ್ಜೆಯಲ್ಲಿ ಉತೀರ್ಣರಾಗುವಲ್ಲಿ  ಅವರದ್ದು ಗಮನಾರ್ಹ ಸಾಧನೆ.

ಕಳೆದ ಹಲವು ವರ್ಷಗಳಿಂದ ಸ್ಥಳೀಯ, ಅಸೆಂಬ್ಲಿ, ಲೋಕಸಭಾ ಚುನಾವಣೆ ಹೀಗೆ ಯಾವ ಚುನಾವಣೆಯಲ್ಲೂ ಮತದಾನ ತಪ್ಪಿಸಿಕೊಳ್ಳದ ಸಬಿತಾ ಕಾಲುಗಳಿಂದ ಮತದಾನ ಮಾಡಿ ಮತದಾನದ ಮಹತ್ವ ಜಾಗೃತಿ ಮೂಡಿಸುವಲ್ಲೂ ಮಾದರಿಯಾದವರು.

ಕೈಗಳಿಲ್ಲ ಎನ್ನುವ ಕೊರತೆಯೇ ಕಾಡದಂತೆ ತನ್ನ ನಿತ್ಯ ಕಾರ್ಯ, ಕರ್ತವ್ಯ ನಿರ್ವಹಣೆಯಲ್ಲಿ ಪರಾವಲಂಬಿಯಾಗದೇ ಅನ್ಯರಿಗೆ ಆತ್ಮವಿಶ್ವಾಸದ ಚಿಲುಮೆಯಾಗಿರುವ ಸಬಿತಾ ತನ್ನ ಕಾಲಮೇಲೆ ನಿಂತುಕೊಳ್ಳಬೇಕು ಎನ್ನುವ ಮಾತಿಗೊಂದು ಪಕ್ಕಾ ನಿದರ್ಶನ.

ಕಳೆದ ಎರಡು ದಶಕಗಳಿಂದ ಮೊದಲು ವಿದ್ಯಾರ್ಥಿಯಾಗಿ, 2010ರಿಂದ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾಗಿ ಬದುಕು ಕಟ್ಟಿಕೊಳ್ಳುವಲ್ಲಿ ಸಬಿತಾ ಪಾಲಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ. ಎಂ. ಮೋಹನ

ಆಳ್ವರ ಕೊಡುಗೆ ಮಹತ್ವದ್ದಾಗಿದೆ. ಸರಕಾರಿ ಉದ್ಯೋಗಿಯಾಗಿ ಸಮಾಜ ಸೇವೆಯ ಕನಸು ಸಬಿತಾ ಅವರಿಗಿದೆ.

ಆಕೆಯ ಚುರುಕಿನ ಚಟುವಟಿಕೆ ಮತ್ತು ಜೀವನೋತ್ಸಾಹ ಸಾಧನೆಗಾಗಿ ಈಗಾಗಲೇ ರಾಜ್ಯಪಾಲರಿಂದ ಶೈಕ್ಷಣಿಕ ಸಾಧನೆಗಾಗಿ ಪುರಸ್ಕಾರ (2001), ಕೆಥೊಲಿಕ್ ರತ್ನ (2012) ಸ್ವಾಭಿಮಾನ ಪ್ರಶಸ್ತಿ (2014) ರಾಷ್ಟ್ರೀಯ ಮಹಿಳಾ ಸಾಧಕಿ ಪುರಸ್ಕಾರ (2021) ಕರುನಾಡ ರತ್ನಶ್ರೀ ಪುರಸ್ಕಾರ (2022) ಸಹಿತ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.

ಈ ವರ್ಷ ಅಂತಾರಾಷ್ಟ್ರೀಯ ಸೇವಾ ಸಂಘಟನೆ ರೋಟರಿಯನ್ನು ಮೊದಲ ಬಾರಿಗೆ ಮಹಿಳಾ ಅಧ್ಯಕ್ಷೆ ಜೆನ್ನಿಫರ್ ಇ ಜೋನ್ಸ್ ಮುನ್ನಡೆಸುತ್ತಿದ್ದು ಮೂಡುಬಿದಿರೆ ರೋಟರಿಯ  ಪ್ರಸಕ್ತ ಸಾಲಿನ ಅಧ್ಯಕ್ಷ ಮಹಮ್ಮದ್ ಆರೀಫ್ ಬಳಗದ ಪದಗ್ರಹಣ ಸಮಾರಂಭದಲ್ಲಿ ನಿಶ್ಮಿತಾ ಪ್ಯಾರಡೈಸ್ ಮಲ್ಟಿ ಪರ್ಪಸ್ ಹಾಲ್ನಲ್ಲಿ ಜುಲೈ 4ರ ಸೋಮವಾರ ಸಂಜೆ 6.45ಕ್ಕೆ ಸಬಿತಾ ಮೋನಿಸ್ ಅವರಿಗೆ ರೋಟರಿ ಗೌರವ ಪ್ರದಾನ ಮಾಡಲಾಗುತ್ತಿದೆ.

ರೋಟರಿಯ ಮಾಜಿ ಡಿಸ್ಟ್ರಿಕ್ಟ್ ಗವರ್ನರ್ ಎಂ.ಎಂ. ಚೆಂಗಪ್ಪ, ಅಸಿಸ್ಟೆಂಟ್ ಗವರ್ನರ್ ಮೇಜರ್ ಜನರಲ್  ಎಂ.ವಿ.ಭಟ್, ವಲಯ ಲೆಫ್ಟಿನೆಂಟ್ ವಿನ್ಸೆಂಟ್ ಡಿಕೋಸ್ತಾ ಅವರ ವಿಶೇಷ ಉಪಸ್ಥಿತಿಯಲ್ಲಿ ಗೌರವ ಪ್ರದಾನ ನಡೆಯಲಿದೆ.

Leave a Comment