ಬಂಟ್ವಾಳ:ಮೈಸೂರಿನಲ್ಲಿ ಬುಧವಾರ ನಡೆದ ರಾಜ್ಯ ಸರ್ಕಾರದ ಮಹತ್ವದ 'ಗೃಹಲಕ್ಷ್ಮಿ ಯೋಜನೆ' ಉದ್ಘಾಟನೆ ಕಾರ್ಯಕ್ರಮದ ನೇರ ಪ್ರಸಾರವನ್ನು ತಾಲ್ಲೂಕಿನಾದ್ಯಂತ ವಿವಿಧೆಡೆ ಪರದೆ ಮೇಲೆ ಸಾವಿರಾರು ಮಂದಿ ವೀಕ್ಷಿಸಿದರು.
ಇಲ್ಲಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ನೇರ ಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಉಳಿದಂತೆ ಪುರಸಭಾ ವ್ಯಾಪ್ತಿಯ ಬಿ.ಸಿ.ರೋಡು ರಂಗೋಲಿ ಸಭಾಂಗಣ, ರೋಟರಿ ಸಭಾಂಗಣ, ಕೈಕಂಬ ಸೂರ್ಯ ಸಭಾಂಗಣ, ಮೆಲ್ಕಾರ್ ಬಿರ್ವ ಸಭಾಂಗಣ ಸಹಿತ ಪುರಸಭೆ ಕಚೇರಿ ಸಭಾಂಗಣದಲ್ಲಿ ನೇರ ಪ್ರಸಾರ ವೀಕ್ಷಣೆಗೆ ಡಿಜಿಟಲ್ ಪರದೆ ಅಳವಡಿಸಲಾಗಿತ್ತು.
ಮಾಜಿ ಸಚಿವ ಬಿ.ರಮಾನಾಥ ರೈ, ಪುರಸಭೆ ಮಾಜಿ ಅಧ್ಯಕ್ಷೆ ಜಾಸ್ಫಿನ್ ಡಿಸೋಜ, ಬ್ಲಾಕ್ ಖಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಚಂದ್ರಪ್ರಕಾಶ ಶೆಟ್ಟಿ, ಬಿ.ಪದ್ಮಶೇಖರ ಜೈನ್, ಪ್ರಮುಖರಾದ ಸದಾಶಿವ
ಬಂಗೇರ, ಜಗದೀಶ ಕುಂದರ್, ಚಿತ್ತರಂಜನ್ ಶೆಟ್ಟಿ, ಡೆಂಜಿಲ್,ಲೋಕೇಶ ಸುವರ್ಣ, ವಾಸು ಪೂಜಾರಿ, ಗಂಗಾಧರ ಪೂಜಾರಿ, ತಹಶೀಲ್ದಾರ್ ಎಸ್.ಬಿ.ಕೂಡಲಗಿ, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಅಧಿಕಾರಿಗಳಾದ ಉಮಾವತಿ, ಶೀಲಾವತಿ, ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಇಕ್ಬಾಲ್ ಮತ್ತಿತರರು ಇದ್ದರು.
ಗೊಂದಲ:
ಇಲ್ಲಿನ ಪುರಸಭೆ ಸಹಿತ ಕಂದಾಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ನಡುವಿನ ಸಮನ್ವಯ ಕೊರತೆಯಿಂದ ನಿಗದಿತ ಸ್ಥಳದಲ್ಲಿ ಸ್ಥಳಾವಕಾಶ ಕೊರತೆ ಮತ್ತಿತರ ಗೊಂದಲ ಉಂಟಾಯಿತು. ಇದರಿಂದಾಗಿ ಮಹಿಳೆಯರು ಆಧಾರ್ ಕಾರ್ಡ್ ಹಿಡಿದುಕೊಂಡು ಕೆಲಹೊತ್ತು ವಿವಿಧೆಡೆ ಅಲೆಯುವಂತಾಯಿತು ಎಂದು ದೂರಿಕೊಂಡರು.















