ಮಂಗಳೂರು : ಹಿರಿಯ ಯಕ್ಷಗಾನ ಕಲಾವಿದ, ಅರ್ಥಧಾರಿ,ವಿಮರ್ಶಕ ಹಾಗೂ ಮಾಜಿ ಶಾಸಕ ಕುಂಬ್ಳೆ ಸುಂದರ್ ರಾವ್ ಅವರು ಇಂದು ಬೆಳಗ್ಗಿನ ಜಾವಾ ನಿಧನರಾಗಿದ್ದಾರೆ.
ಅವರಿಗೆ 85 ವರ್ಷವಾಗಿತ್ತು. ಕಳೆದ ಕೆಲ ದಿನಗಳ ಹಿಂದೆ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಇಂದು ಬೆಳಗ್ಗಿನ ಜಾವಾ ಮೂರು ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ.
ಬಿಜೆಪಿಯಿಂದ ಟಿಕೆಟ್ ಪಡೆದು ಸುರತ್ಕಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಗೆದ್ದು 1994 ರಿಂದ 1999 ರವರೆಗೆ ಶಾಸಕರಾಗಿ ಸೇವೆ ಸಲ್ಲಿಸಿದರು.
ಮತದಾರರಿಂದಲೇ ವಿಧಾನಸಭೆಗೆ ಆರಿಸಲ್ಪಟ್ಟ ಪ್ರಪ್ರಥಮ ಯಕ್ಷಗಾನ ಕಲಾವಿದ ಎಂಬ ಶಾಸಕರೆಂಬ ಹೆಗ್ಗಳಿಕೆ ಇವರಿಗೆ ಇದೆ. ಈ ಅವಧಿಯಲ್ಲಿ ರವೀಂದ್ರ ಕಲಾಕ್ಷೇತ್ರವನ್ನು ಯಕ್ಷಗಾನ ಪ್ರದರ್ಶನಕ್ಕೆ ಸರಕಾರ ನಿರಾಕರಿಸಿದಾಗ, ಸದನದಲ್ಲಿ ಪ್ರತಿಭಟಿಸಿ ಯಕ್ಷಗಾನಕ್ಕೆ ಅನುಮತಿ ದೊರಕಿಸಿಕೊಟ್ಟಿದ್ದರು.
ಇವರು ಸುರತ್ಕಲ್ , ಧರ್ಮಸ್ಥಳ , ಇರಾ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಲಯಬದ್ಧ ಮಾತುಗಾರಿಕೆಗೆ ಹೆಸರಾಗಿದ್ದ ಇವರು ಯಕ್ಷಗಾನ ಬಯಲಾಟ ಹಾಗೂ ತಾಳಮದ್ದಳೆಯಲ್ಲಿ ಹೆಸರಾಂತ ಕಲಾವಿದರಾಗಿದ್ದರು.
ಎಲ್ಲಾ
ಬಗೆಯ ಪಾತ್ರಗಳನ್ನು ಲೀಲಾಜಾಲವಾಗಿ ಮಾಡುತ್ತಿದ್ದ ಇವರಿಗೆ ಅನೇಕ ಪ್ರಶಸ್ತಿಗಳು, ಗೌರವಗಳು ಲಭಿಸಿದೆ. ಅಲ್ಲದೇ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಮಾಡಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದಿಂದ 2018-19 ಸಾಲಿನ ಯಕ್ಷಮಂಗಳ ಪ್ರಶಸ್ತಿ ಪಡೆದಿದ್ದಾರೆ.
ಇವರ ನಿಧನಕ್ಕೆ ಯಕ್ಷಗಾನ ವಲಯ ಹಾಗೂ ಧರ್ಮಸ್ಥಳ ಧರ್ಮಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ ಹೀಗೆ ಹಲವು ಶಾಸಕರು ಸಂತಾಪ ಸೂಚಿಸಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರ ನಾಳೆ ನಡೆಯಲಿದೆ. ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಮಂಗಳೂರು ಪಂಪ್ ವೆಲ್ ಬಳಿ ಇರುವ ಅವರ ಮನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.















