ಬಂಟ್ವಾಳ:ನಾಡ ಹಬ್ಬ ನವರಾತ್ರಿ ಕೆಲವೇ ದಿನದಲ್ಲಿ ಸಂಭ್ರಮ ಸಡಗರದಿಂದ ಶುರುವಾಗಲಿದೆ, ದಸರಾ ಸಂದರ್ಭದಲ್ಲಿ ಆಸ್ತಿಕ ಭಕ್ತರು ಸಕಲ ಇಷ್ಟಾರ್ಥವನ್ನು ಕರುಣಿಸುವ ಶ್ರೀ ಶಾರದಾ ಮಾತೆಯನ್ನು ವಿವಿಧ ದೇವಸ್ಥಾನ,ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸಿ ನವರಾತ್ರಿಯ ಕೊನೆಯ ದಿನ ಶೋಭಯಾತ್ರೆಯ ಮೂಲಕ ಜಲಸ್ತಂಭಣ ಮಾಡಿ ಪುನೀತರಾಗುತ್ತಾರೆ.
ಈ ದಸರಾ ಶೋಭಾಯಾತ್ರೆಗೆ ಮೆರಗು ನೀಡಲು ವಿವಿಧ ಆಕರ್ಷಕ ಸ್ತಬ್ಧಚಿತ್ರಗಳು ಅಣಿಯಯಾಗುತ್ತವೆ. ಈ ಸಲ ಪ್ರಸಿದ್ಧ ಮಂಗಳೂರು ದಸರಾ ಸೇರಿದಂತೆ ವಿವಿಧ ಕಡೆ ಶಾರದಾ ಮಾತೆಯ ಶೋಭಾಯಾತ್ರೆಯ ಅಂದ ಹೆಚ್ಚಿಸಲು ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲುವಿನ ಕಲಾಕಾರ ಮನೋಜ್ ಕನಪಾಡಿಯವರ ಕುಕ್ಕೆಶ್ರೀ ಕುಟೀರದಲ್ಲಿ ಆದಿಯೋಗಿಯ ವಿಗ್ರಹವೊಂದರ ವಿನೂತನ ಸ್ತಬ್ಧಚಿತ್ರ ಸದ್ದಿಲ್ಲದೇ ಸಿದ್ಧಗೊಂಡು ಅಂತಿಮ ಸ್ಪರ್ಶದಲ್ಲಿದೆ.
ಕಳೆದ 20 ವರ್ಷಗಳಿಂದ ಕಲಾಕೃತಿಗಳ ತಯಾರಿಕೆಯಲ್ಲಿ ತನನ್ನು ಶ್ರದ್ದಾ ಭಕ್ತಿಯಿಂದ ತೊಡಗಿಸಿಕೊಂಡಿರುವ ಅಪ್ಪಟ ಪ್ರತಿಭಾವಂತ ಕಲಾವಿದ ಮನೋಜ್ ಕನಪಾಡಿ ಇವರು ಬಾಲ್ಯದಲ್ಲಿ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದರು ಇದಕ್ಕೆ ಪೂರಕವಾಗಿ ಮಂಗಳೂರಿನ ಮಹಾಲಸ ಕಾಲೇಜಿನಲ್ಲಿ ಡಿಪ್ಲೊಮೋ ಪದವಿ ಬಳಿಕ ಕಲಾಕೃತಿ ರಚನೆಯಲ್ಲಿ ವೃತ್ತಿ ಆರಂಭಿಸಿದ ಅವರು ಮಣ್ಣಿನ ಮೂರ್ತಿಗಳ ರಚನೆಯಲ್ಲಿ ತೊಡಗಿಸಿಕೊಂಡರು. ಕ್ರಮೇಣ ಜನರಿಗೆ ಆಕರ್ಷಣೆಯಾಗುವ ಮತ್ತು ಹೆಚ್ಚು ಬಾಳಿಕೆ ಬರುವ ಫೈಬರ್ ಕಲಾಕೃತಿಗಳ ರಚನೆಯಲ್ಲಿ ತೊಡಗಿಸಿ ಬ್ರಹ್ಮರಕೊಟ್ಲುವಿನಲ್ಲಿ ಕುಕ್ಕೆಶ್ರೀ ಕಲಾಕೇಂದ್ರದಲ್ಲಿ ಜನರ ಬೇಡಿಕೆ ಅನುಗುಣವಾದ ಫೈಬರ್ ಮೂರ್ತಿ ಸಿದ್ದಪಡಿಸಿ ಮಾರಾಟ ಮಾಡುವ ಮೂಲಕ ಪ್ರವೃತ್ತಿಯನ್ನು ವೃತ್ತಿಯಾಗಿಸಿದರು. ಇವರ ಕುಕ್ಕೆಶ್ರೀ ಕಲಾ ಕೇಂದ್ರದಲ್ಲಿ ವಿವಿಧ ರೀತಿಯ ಹತ್ತು ಹಲವು ಕಲಾಕೃತಿಗಳನ್ನು ಕಾಣಬಹುದು. ಇವರ ಕಲಾಕೃತಿ ರಚನೆಯ ಸಾಧನೆಗಾಗಿ ಹತ್ತು ಹಲವು ಪ್ರಶಸ್ತಿಗಳು ಲಭಿಸಿದ್ದಲ್ಲದೆ ಸನ್ಮಾನಗಳಿಗೆ ಭಾಜನರಾಗಿದ್ದಾರೆ.
ಆಕರ್ಷಕ,
ವಿಶಿಷ್ಟ,ವಿನೂತನ ಶೈಲಿಯ ಕಲಾಕೃತಿ ತಯಾರಿಯಲ್ಲಿ ಪರಿಣತಿ ಪಡೆದ ಇವರು ಈಗಾಗಲೇ ಛತ್ರಪತಿ ಶಿವಾಜಿ, ಈಶ್ವರ, ಕತ್ತೆತ್ತಿ ನೋಡುವ ಚಿರಾಫೆ, ಯಕ್ಷಗಾನ ಶೈಲಿ ಗೊಂಬೆ, ಕಂಬಳ ಕೋಣ, ಎತ್ತು ಉಳುಮೆ ಮಾಡುವ ರೈತ, ಗೀತೋಪದೇಶ, ಪ್ರಾಣಿ, ಪಕ್ಷಿ ಸೇರಿದಂತೆ ನೂರಾರು ಸ್ತಬ್ಧ ಚಿತ್ರ ರಚಿಸಿ ಅವರು ಸೈ ಎನಿಸಿಕೊಂಡಿದ್ದಾರೆ. ಮನೋಜ್ ಅವರ ಕೈಚಳಕದಲ್ಲಿ ವಿವಿಧ ರಸ್ತೆಗಳು ಸರ್ಕಲ್‌ಗಳಿಗೆ ಮೂರ್ತಿ, ರೆಸಾರ್ಟ್, ಗಾರ್ಡನ್, ಹೊಟೇಲ್ಗಳಿಗೆ ವಿಗ್ರಹ ತಯಾರಾಗಿದೆ.
ಈ ಬಾರಿಯ ದಸರಾಕ್ಕೆ ಆವೆ ಮಣ್ಣಿನಲ್ಲಿ ಮೂರ್ತಿ.
ಮಂಗಳೂರು ದಸರಾ ಸೇರಿದಂತೆ ಹಲವು ಕಡೆಗಳ ಮೆರವಣಿಗೆಯಲ್ಲಿ ಪ್ರಮುಖ ಆಕರ್ಷಣೆಯಾಗಲಿರುವ ಆದಿಯೋಗಿ ಲೇಸರ್ ಶೋ ಪ್ರದರ್ಶನಕ್ಕೆ ಮೂರ್ತಿಯನ್ನು ಸಿದ್ದಪಡಿಸುವ ಕಾರ್ಯದಲ್ಲಿ ಮನೋಜ್ ಮತ್ತವರ ತಂಡ ತೊಡಗಿಕೊಂಡಿದೆ. ಜಿಲ್ಲೆಯಲ್ಲಿ ಫೈಬರ್ ಆರ್ಟ್ ಕಲಾವಿದರು ಅಪರೂಪವಾಗಿದ್ದು, ಎರಡರಿಂದ ಮೂರು ತಿಂಗಳ ಸತತ ಪರಿಶ್ರಮದ ಬಳಿಕ ಇಂತಹ ಮೂರ್ತಿಗಳು ಸಿದ್ದಗೊಳ್ಳಲಿದ್ದು, ಪ್ರಾರಂಭದಲ್ಲಿ ಆವೆ ಮಣ್ಣಿನಲ್ಲಿ ಮೂರ್ತಿಯನ್ನು ತಯಾರಿಸಿ ಬಳಿಕ ಅದರಿಂದ ಫೈಬರ್ ಮೋಲ್ಡ್ ಸಿದ್ಧಪಡಿಸುತ್ತಾರೆ.
ಬಡ ಕುಟುಂಬದಲ್ಲಿ ಬೆಳೆದು ಕಠಿಣ ಪರಿಶ್ರಮ, ಶ್ರದ್ದೆಯಿಂದ ಸ್ವಾವಲಂಬಿ ಬದುಕು ಕಟ್ಟಿ ಸಮಾಜಕ್ಕೆ ತನ್ನಿಂದ ಏನಾದರೂ ಸೇವೆ ಕೊಡಬೇಕು ಎನ್ನುವ ತುಡಿತದಿಂದ ಬೆಳೆದು ಕಲಾ ಸಾಧಕನಾಗಿ ಹೆಸರು ಮಾಡುತ್ತಿರುವ ಕಲಾವಿದ ಮನೋಜ್ ಕನಪಾಡಿಯವರ ಕಲಾ ಜೀವನ ಇನ್ನಷ್ಟು ಬೆಳಗಲಿ ಎನ್ನುವುದೇ ಆಶಯ.















