ಇದೊಂದು ದೈವ ಸಂಕಲ್ಪವೇ ಎನ್ನಬೇಕು. ಇಲ್ಲವಾದರೆ ಎಲ್ಲಿಯ ಅಯೋಧ್ಯೆ? ಎಲ್ಲಿಯ ಈದು? ಅಷ್ಟಕ್ಕೂ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಾಮ ಮಂದಿರಕ್ಕೆ ಮೂಡುಬಿದಿರೆ -ಕಾರ್ಕಳ ತಾಲೂಕು ಗಡಿ ಭಾಗದ ಈದುವಿನ ತುಂಗ ಪೂಜಾರಿಯವರ ಜಾಗದ ಕೃಷ್ಣ ಶಿಲೆಯೊಂದು ಆಯ್ಕೆಯಾಗಿ ಹೊರಟು ನಿಂತದ್ದು ನೋಡಿದರೆ ದೈವ ಸಂಕಲ್ಪಕ್ಕೆ ಏನಾದರೂ ವಿಶೇಷ ಕಾರಣಗಳಿರಬಹುದೇ ಎಂದು ಅವಲೋಕಿಸಿದಾಗ ಈದುವಿನಲ್ಲಿ ಶ್ರೀ ರಾಮ 'ನವಮಿ'ಯದ್ದೇ ವಿಶೇಷ ಎನ್ನುವುದು ಗಮನ ಸೆಳೆಯುತ್ತದೆ!
ಹೌದು. ಈದು ಎನ್ನುವುದು ಪಶ್ಚಿಮ ಘಟ್ಟದ ತಪ್ಪಲಿನ ಅಪರೂಪದ ಸಾವಿರ ಮನೆಗಳ ಗ್ರಾಮ. ಇಲ್ಲಿ ಗ್ರಾಮಕ್ಕೇ ಪ್ರಧಾನ ಎನ್ನುವಂತಿರುವ ಸುಮಾರು ಏಳು ಶತಮಾನಗಳಿಗೂ ಮಿಕ್ಕಿದ ಇತಿಹಾಸವಿರುವ ಶ್ರೀ ಮೂಜಿಲ್ನಾಯ ದೈವ ಸನ್ನಿಧಿ. ದೈವಸ್ಥಾನವೇ ಪ್ರಧಾನ ಧಾಮರ್ಿಕ ತಾಣ. ಇಲ್ಲಿನ ವಷರ್ಾವಧಿ ಜಾತ್ರೆ ಅದು ಊರಿಗೇ ದೊಡ್ಡ ಹಬ್ಬ. ಅಂದ ಹಾಗೆ ಹೊಸವರ್ಷ ಯುಗಾದಿಗೆ ವಿಧಿ ವಿಧಾನಗಳು ಆರಂಭಗೊಂಡು ಶ್ರೀರಾಮ ನವಮಿಯಂದೇ ಇಲ್ಲಿ ಮಹೋತ್ಸವ! ಹಾಗಾಗಿ ಶ್ರೀರಾಮ ನವಮಿ ಊರಿನವರೆಲ್ಲ ಶ್ರದ್ಧಾ ಭಕ್ತಿಯಿಂದ ದೈವಕ್ಕೆ ನಮಿಸುವ ಸಂಭ್ರಮ. ದೈವಕ್ಕೆ ಸಲ್ಲಿಸುವ ವಿಶೇಷ ಪಂಜಕಜ್ಜಾಯ ಪೂಜೆಯೇ ಭಜಕರ ಪಾಲಿನ ಮಹಾಪ್ರಸಾದ.
ಇದೀಗ ಈದು ದೈವಸ್ಥಾನದ ವ್ಯಾಪ್ತಿಯ ಈಶಾನ್ಯ ದಿಕ್ಕಿನಲ್ಲಿ ತುಂಗ ಪೂಜಾರಿಯವರ ನಿವೇಶನದಲ್ಲಿ ಶ್ರೀರಾಮನಾಗುವ ಶಿಲೆ ದೊರೆತಿದೆ ಎಂದರೆ ಇದು ದೈವ ಪ್ರೇರಣೆಯೇ ಎನ್ನುತ್ತಾರೆ ಸ್ಥಳೀಯ ದೈವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ಕುಮಾರ್ ಜೈನ್. ಅಷ್ಟಕ್ಕೂ ರಾಮನಿಗೂ ನವಮಿಗೂ ವಿಶೇಷ ನಂಟು. ಈದು ದೈವಸ್ಥಾನದಲ್ಲೂ ನವಮಿ ವಿಶೇಷತೆಗಳು ಬಹಳಷ್ಟಿವೆ ಎನ್ನುವುದೂ ಗಮನಾರ್ಹ.
ತುಂಗ ಪೂಜಾರಿ ಧನ್ಯತಾ ಭಾವ:
ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ಶ್ರೀರಾಮನ ವಿಗ್ರಹಕ್ಕೆ ತನ್ನ ನಿವೇಶನದ ಶ್ರೀ ಕೃಷ್ಣ ಶಿಲೆ ಆಯ್ಕೆಯಾಗಲಿದೆ ಎನ್ನುವ ಕಲ್ಪನೆಯೂ ಇರದ ಈದು ತುಂಗ ಪೂಜಾರಿ ಈ ಬೆಳವಣಿಗೆಯಿಂದ
ಸಂಭ್ರಮಿಸಿದ್ದಾರೆ. ಹಲವಾರು ವರ್ಷಗಳಿಂದ ತಮ್ಮ ಮನಸ್ಸಿನಾಸೆಯಂತೆ ಶ್ರೀ ಸತ್ಯನಾರಾಯಣ ಪೂಜೆಯನ್ನು ನೆರವೇರಿಸುತ್ತಾ ಬಂದಿರುವ ತುಂಗ ಪೂಜಾರಿ ತನ್ನ ಪಾಲಿಗೆ ಒದಗಿ ಬಂದ ಭಾಗ್ಯ ಎಂದೇ ಭಾವಿಸಿದ್ದಾರೆ.
ಎರಡು ದಶಕಗಳ ಹಿಂದೆ ಉಡುಪಿ ಜಿಲ್ಲಾ ವ್ಯಾಪ್ತಿಯ ಈದು ಎರಡು ಬಲಿ ಪಡೆದ ಮೊದಲ ನಕ್ಸಲ್ ಎನ್ಕೌಂಟರ್ನಿಂದ ಸುದ್ದಿಯಾಗಿತ್ತು. ಆದರೆ ಈಗ ಶ್ರೀರಾಮನಾಗುವ ಶಿಲೆಯಿಂದ ರಾಷ್ಟ್ರಮಟ್ಟಕ್ಕೆ ತೆರೆದುಕೊಳ್ಳುವಂತಾಗಿರುವುದೂ ಗಮನಾರ್ಹವೇ.
ಈದುವಿನ 'ನವಮಿ' ವಿಶೇಷತೆಗಳು!!
ರಾಮನಾಗುವ ಶಿಲೆಯಿಂದ ಗಮನ ಸೆಳೆದ ಈದುವಿನಲ್ಲಿ ಶ್ರೀ ರಾಮ 'ನವಮಿ'ಯಂದೇ ಊರ ದೈವಸ್ಥಾನದ ಮಹೋತ್ಸವ. ಅದೂ 9 ದಿನಗಳ (ನವಮಿ) ಉತ್ಸವ. ಈ ದೈವಸ್ಥಾನದಲ್ಲಿನ ಏಳು ದೈವಗಳು ಬ್ರಹ್ಮ , ನಾಗಸನ್ನಿಧಿ ಸೇರಿ ಇಲ್ಲಿ ಆರಾಧ್ಯ ಶಕ್ತಿಗಳೂ 9!
ಮುಜರಾಯಿ ಸುಪರ್ದಿಗೆ ಬರುವ ಈ ದೈವಸ್ಥಾನದ ಆಡಳಿತ ಮಂಡಳಿಯಲ್ಲೂ 9 ಮಂದಿಯಿದ್ದಾರೆ. ಹೀಗೆ ಶ್ರೀ ರಾಮ..ನವಮಿಯ ನಂಟಿನೊದಿಗೆ ಬೆಸೆದಿರುವ ಈದುವಿನಿಂದ ಆಯ್ಕೆಯಾದ ಶಿಲೆ ಹೊರಟು ನಿಂತದ್ದೂ ಕಳೆದ ಮಾ17ರ ಫಾಲ್ಗುನ ಬಹುಳ 'ನವಮಿ'ಯಂದು! ಮೂವರು ಪುತ್ರಿಯರು, ಅಳಿಯಂದಿರು, ಮೂವರು ಮೊಮ್ಮಕ್ಕಳು ಹೀಗೆ 9 ಮಂದಿ ಸಂಬಂಧಿಗಳ ಜತೆ ಈ ಸಂಭ್ರಮದಲ್ಲಿ ಧನ್ಯತೆಯನ್ನುಂಡವರು ತುಂಗ- ರತ್ನ ದಂಪತಿ. ಅಷ್ಟಕ್ಕೂ ಅಯೋಧ್ಯೆಯಲ್ಲಿನ್ನು ಶ್ರೀ ರಾಮ ಮಂದಿರ ಲೋಕಾರ್ಪಣೆಗೂ ಬರೇ ಒಂಭತ್ತು ತಿಂಗಳಷ್ಟೇ ಬಾಕಿ ಎನ್ನುವುದೂ ವಿಶೇಷ.














