ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿಯಾಗುತ್ತಿದೆ ಮಾರಿಪಳ್ಳ ಜಂಕ್ಷನ್.

ಯಾದವ ಕುಲಾಲ್ ಬಿ ಸಿ ರೋಡ್.
ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿಯಾಗುತ್ತಿದೆ ಮಾರಿಪಳ್ಳ ಜಂಕ್ಷನ್.

ಬಿ.ಸಿ.ರೋಡ್ : ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅರ್ಕುಳದಿಂದ ಬಿ.ಸಿ.ರೋಡು ತನಕ ಅಪಾಯಕಾರಿ ಜಂಕ್ಷನ್‌ಗಳೇ ಹೆಚ್ಚಾಗಿವೆ. ಹೆದ್ದಾರಿಯುದ್ದಕ್ಕೂ ಸರಿಯಾದ ಬಸ್‌ಬೇ ಇಲ್ಲದೇ, ಸಾರ್ವಜನಿಕರಿಗೆ ರಸ್ತೆ ದಾಟಲು ಝೀಬ್ರಾ ಕ್ರಾಸ್ ಇಲ್ಲದೇ, ರಸ್ತೆಯುದ್ದಕ್ಕೂ ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ ನಡೆದುಕೊಂಡು ಹೋಗಲು ರಸ್ತೆ ಬದಿಯಲ್ಲಿ ಗುರುತು ಇಲ್ಲದೇ ಇರುವುದರಿಂದಲೇ ಅನೇಕ ಸಾರ್ವಜನಿಕರು ಹಾಗೂ ದ್ವಿಚಕ್ರ ವಾಹನ ಸವಾರರೇ ಹೆಚ್ಚಾಗಿ ಅಪಘಾತಕ್ಕೊಳಗಾಗುತ್ತಿದ್ದಾರೆ. ಅದರಲ್ಲಿಯೂ ಪುದು ಗ್ರಾಮದಲ್ಲಿ ಕೆಲವೇ ಅಂತರದಲ್ಲಿ ಎರೆಡೆರಡು ಹೆದ್ದಾರಿ ಕ್ರಾಸಿಂಗ್ ನಿರ್ಮಾಣ ಮಾಡಿರುವುದರಿಂದ ನಿತ್ಯ ಅಪಘಾತಗಳಾಗುತ್ತಾ ಇದೆ. ಕಡೆಗೋಳಿ ಜಂಕ್ಷನ್ ದಾಟಿದ ಕೂಡಲೇ ಕೆಲವೇ ಮೀಟರ್ ಅಂತರದಲ್ಲಿ ಮಾರಿಪಳ್ಳ ಜಂಕ್ಷನ್ ಸಿಗುತ್ತದೆ, ಅದು ಈಗ ಅಪಾಯಕಾರಿ ಜಂಕ್ಷನ್ ಆಗಿರುತ್ತದೆ.

ಬಿ.ಸಿ.ರೋಡು ಭಾಗದಿಂದ ಸಂಚರಿಸುವಾಗ ಈ ರಸ್ತೆ ಸ್ವಲ್ಪ ಇಳಿಜಾರು ರಸ್ತೆಯಾಗಿದ್ದು, ತುಂಬೆ ಜಂಕ್ಷನ್ ನಂತರ ಎರಡು ಕಿಲೋ ಮೀಟರ್ ಅಂತರದಲ್ಲಿ ಕಡೆಗೋಳಿ ಜಂಕ್ಷನ್, ಕಡೆಗೋಳಿ ಜಂಕ್ಷನ್‌ನಿಂದ ಕೇವಲ ಅರ್ದ ಕಿಲೋ ಮೀಟರ್ ಅಂತರದಲ್ಲಿ ಮಾರಿಪಳ್ಳ ಜಂಕ್ಷನ್, ಮಾರಿಪಳ್ಳ ಜಂಕ್ಷನ್‌ನಿಂದ ಒಂದೂವರೆ ಕಿಲೋ ಮೀಟರ್ ಅಂತರದಲ್ಲಿ ಫರಂಗಿಪೇಟೆ ಜಂಕ್ಷನ್ ಇರುತ್ತದೆ.

ಹೇಗಿದೆ ಮಾರಿಪಳ್ಳ ಜಂಕ್ಷನ್ : ಯಾವುದೇ ವೃತ್ತ ಇಲ್ಲದೇ, ಹೆದ್ದಾರಿಯ ಒಂದು ಬದಿಯಲ್ಲಿ ಪುದು ಗ್ರಾಮದ ಗ್ರಾಮೀಣ ಭಾಗಗಳಿಗೆ ಹೋಗುವ ರಸ್ತೆ ಇದ್ದು, ಫರಂಗಿಪೇಟೆಯಿಂದ ಬರುವ ವಾಹನ ಸವಾರರು ತಕ್ಷಣವೇ ಈ ಗ್ರಾಮೀಣ ರಸ್ತೆಗೆ ತಿರುವು ಪಡೆಯುತ್ತಾರೆ. ಬಿ.ಸಿ.ರೋಡು ಕಡೆಯಿಂದ ಬರುವ ರಸ್ತೆ ಇಳಿಜಾರಾಗಿರುವುದರಿಂದ ವೇಗವಾಗಿಯೇ ಈ ಭಾಗದಲ್ಲಿ ಸಂಚಾರ ಮಾಡುತ್ತಾರೆ. ಈ ಸ್ಥಳದಲ್ಲಿ ಯಾವುದೇ ಸೂಚನಾ ಫಲಕ ಇಲ್ಲ, ಕೇವಲ ಒಂದು ಬ್ಯಾರಿಕೇಡ್ ಮಾತ್ರ ಇರುತ್ತದೆ. ಈ ಗ್ರಾಮೀಣ ರಸ್ತೆಯಲ್ಲಿ ಸರಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆ ಇದ್ದು ಶಾಲಾ ಮಕ್ಕಳು ಹಾಗೂ ಈ ರಸ್ತೆಯಲ್ಲಿ ಸಂಚಾರ ಮಾಡುವ ಗ್ರಾಮಸ್ಥರು ಭಯದಿಂದಲೇ ಈ ಮಾರಿಪಳ್ಳ ಜಂಕ್ಷನ್‌ನಲ್ಲಿ ಸಂಚಾರ ಮಾಡುತ್ತಾರೆ. ಹೆದ್ದಾರಿ ಬದಿಯೇ ಮಾರಿಪಳ್ಳ ಬಸ್ಸು ತಂಗುದಾಣವಿದ್ದು ಆ ಪ್ರದೇಶದಲ್ಲಿಯೇ ಇತರ ವಾಹನಗಳೂ ನಿಂತಿರುವ ಕಾರಣ ಹೆದ್ದಾರಿಯಲ್ಲಿ ವೇಗವಾಗಿ ಬರುವವರು

ಇದರ ಅಂದಾಜಿಲ್ಲದೆ ನಿಯಂತ್ರಣ ತಪ್ಪುವ ಸಾಧ್ಯತೆ ಹೆಚ್ಚು.

ನಿತ್ಯ ಅಪಘಾತ : ಕಳೆದ ಕೆಲವು ದಿನಗಳ ಹಿಂದೆ ಇದೇ ಗ್ರಾಮೀಣ ರಸ್ತೆಯ ಬ್ಯಾರಿಕೇಡ್‌ನ ಅರಿವಿಲ್ಲದೆ ಕಂಟೈನರ್‌ನಡಿಗೆ ಬಿದ್ದು ಇಬ್ಬರು ಪ್ರಾಣಕಳೆದುಕೊಂಡಿದ್ದಾರೆ. ಮತ್ತೊಂದು ಘಟನೆಯಲ್ಲಿ ಗ್ರಾಮೀಣ ರಸ್ತೆಗೆ ತಿರುವು ಪಡೆಯುತ್ತಿರುವಾಗ ಆಂಬುಲೆನ್ಸ್ ವಾಹನ ಡಿಕ್ಕಿ ಹೊಡೆದು ತೀವ್ರ ನಿಘಾಘಟಕದಲ್ಲಿ ದಾಖಲಾಗಿದ್ದಾರೆ. ಬಸ್ಸು ನಿಲ್ದಾಣದಲ್ಲೇ ಬಸ್ಸಿಗಾಗಿ ಕಾಯುತ್ತಿದ್ದ ಮಹಿಳೆಗೆ ವಾಹನ ಡಿಕ್ಕಿ, ಅಷ್ಟೇ ಅಲ್ಲದೆ ದಿನನಿತ್ಯ ಈ ಪ್ರದೇಶದಲ್ಲಿ ಅಫಘಾತ ಸಂಭವಿಸುತ್ತಲೇ ಇದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಬಗ್ಗೆ ಗಮನ ಹರಿಸಬೇಕು. ತಿರುವು ಕೊಟ್ಟರೂ ಬೇಕಾಗುವ ಜಾಗ್ರತಾ ಕ್ರಮ ಕೈಗೊಳ್ಳಬೇಕು. ಅಲ್ಲಲ್ಲಿ ಸೂಚನಾ ಫಲಕ, ಸ್ಪೀಡ್ ಬ್ರೇಕರ್, ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಸುವ ಮೂಲಕ ವ್ಯವಸ್ಥೆ ಮಾಡಿ ವಾಹನ ಸವಾರರಿಗೂ ಅದರ ಅರಿವು ಬರುವಂತೆ ಮಾಡುವುದು ಅಗತ್ಯ. ಟ್ರಾಫಿಕ್ ಪೊಲೀಸ್ ಇಲಾಖೆ ಕೂಡ ಸೂಕ್ತ ವ್ಯವಸ್ಥೆ ಮಾಡಿ ಕೊಳ್ಳುವುದು ಒಳ್ಳೆಯದು.

***********

ಮಾರಿಪಳ್ಳ ಜಂಕ್ಷನ್ ಬಳಿಯಿಂದ ಕಡೆಗೋಳಿ ತನಕ ಸಾರ್ವಜನಿಕರು ಸಂಚರಿಸಲು ಸ್ಥಳೀಯ ವಾಹನಗಳು ಸಂಚಾರ ಮಾಡಲು ಸರ್ವಿಸ್ ರಸ್ತೆ ಮಾಡಿದರೆ ಉತ್ತಮ. ಬಸ್ಸು ನಿಲುಗಡೆ ಮಾಡಲು ಬಸ್ಸ್‌ಬೇ ಮಾಡಿದರೆ ಭಾರಿ ಒಳ್ಳೆಯದು. ಇದರಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳೂ ಯಾವುದೇ ಸಮಸ್ಯೆ ಇಲ್ಲದೇ ಸಂಚಾರ ಮಾಡಬಹುದು.

- ಗಣೇಶ್ ಕುಮಾರ್, ಫರಂಗಿಪೇಟೆ

Leave a Comment