Coastal Bulletin

ಬಂಟ್ವಾಳ: ಅಂತರ್ರಾಷ್ಟ್ರೀಯ ಕಬಡ್ಡಿ ಆಟಗಾರ, ದ.ಕ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಉಪಾಧ್ಯಕ್ಷ, ಏಕಲವ್ಯ ಪ್ರಶಸ್ತಿ ವಿಜೇತ ಮಾಣಿ-ಬದಿಗುಡ್ಡೆ ಉದಯ್ ಚೌಟ ಆಕಸ್ಮಿಕ ಅರೋಗ್ಯ ಸಮಸ್ಯೆಯಿಂದ ಮೇ.21 ರಂದು ಬೆಳಿಗ್ಗೆ ನಿಧನರಾದರು.

2007ರ ವಿಶ್ವಕಪ್ ಕಬಡ್ಡಿ ಪಂದ್ಯಾಟದಲ್ಲಿ ಭಾರತ ತಂಡ ಇರಾನ್ ತಂಡವನ್ನು 29-19 ಅಂತರದಿಂದ ಗೆದ್ದು ದ್ವಿತೀಯ ಬಾರಿ ಗೆಲುವು ಸಾಧಿಸಿತು. ಭಾರತ ತಂಡದಲ್ಲಿ ಆಟವಾಡಿದ ಇವರಿಗೆ ‘ಅತ್ಯುತ್ತಮ ಆಟಗಾರ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

ಪ್ರಸ್ತುತ ಬ್ಯಾಂಕ್ ಆಫ್ ಬರೋಡದ ಸುರತ್ಕಲ್ ಕಚೇರಿಯಲ್ಲಿ ಉಪ ಪ್ರಬಂಧಕರಾಗಿರುವ ಕರ್ತವ್ಯ ನಿರ್ವಹಿಸುತ್ತಿದ್ದ ಉದಯ ಚೌಟ, ಕ್ರೀಡಾ ಕೋಟದಲ್ಲಿ 8 ತಿಂಗಳ ಕಾಲ ಏರ್ ಇಂಡಿಯಾ ಮತ್ತು 10 ತಿಂಗಳ ಕಾಲ ಕೆಪಿಟಿಸಿಎಲ್ ಉದ್ಯೋಗದಲ್ಲಿದ್ದರು.

2004ರಲ್ಲಿ

ಭಾರತ-ಬಾಂಗ್ಲಾ ಟೆಸ್ಟ್ ಕಬಡ್ಡಿ ಪಂದ್ಯಾಟದಲ್ಲಿ 5 ಪಂದ್ಯಗಳನ್ನು ಜಯಿಸಿ ಚಿನ್ನದ ಪದಕವನ್ನು ಪಡೆದಿದ್ದರು. ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆಗೆ ಕರ್ನಾಟಕ ಸರಕಾರ ನೀಡುವ ಏಕಲವ್ಯ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಥಮ ಬಾರಿಗೆ ಪಡೆದ ಹೆಗ್ಗಳಿಕೆ ಇವರದ್ದು. 20 ವರ್ಷಗಳ ಕಾಲ ಕಬಡ್ಡಿ ಜೀವನದಲ್ಲಿ ಅಖಿಲ ಭಾರತ ಮಟ್ಟದಲ್ಲಿ 100ಕ್ಕೂ ಅಧಿಕ, ರಾಜ್ಯಮಟ್ಟದಲ್ಲಿ 300 ಕ್ಕೂ ಅಧಿಕ ಪಂದ್ಯಾಟಗಳನ್ನು ಆಡಿದ್ದಾರೆ.

ಮೃತರು ಪತ್ನಿ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.




Leave a Comment