ಬಂಟ್ವಾಳ: ಕಳೆದ ಬಜೆಟ್ ನಲ್ಲಿ ಘೋಷಣೆಯಾದ ದ.ಕ.ಜಿಲ್ಲೆಯ ನಾರಾಯಣ ಗುರು ವಸತಿ ಶಾಲೆ ಬಂಟ್ವಾಳದ ಪುಂಜಾಲಕಟ್ಟೆ ಬಾಡಿಗೆ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಆರಂಭಿಸುವ ನಿಟ್ಟಿನಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಗುರುವಾರ ಕಟ್ಟಡ ಪರಿಶೀಲಿಸಿದರು.
ಜೊತೆಗೆ ನಾರಾಯಣ ಗುರು ವಸತಿ ಶಾಲೆಯ ಕಟ್ಟಡ ನಿರ್ಮಾಣ ಗೊಳ್ಳಲಿರುವ ನಿವೇಶನ ವನ್ನು ವೀಕ್ಷಿಸಿದರು. ಬಳಿಕ ಮಾತನಾಡಿದ ಶಾಸಕರು ಈ ಶೈಕ್ಷಣಿಕ ವರ್ಷದಿಂದಲೇ ವಸತಿ ಶಾಲೆ ಪ್ರಾರಂಭವಾಗಲಿದ್ದು, 50 ಮಕ್ಕಳನ್ನು ವಸತಿ ಶಾಲೆಗೆ ದಾಖಲಾತಿ ಮಾಡುತ್ತೇವೆ ಎಂದು ಹೇಳಿದರು.
ಪುಂಜಾಲಕಟ್ಟೆಯಲ್ಲಿ ಬಾಡಿಗೆ ಕಟ್ಟಡವೊಂದರಲ್ಲಿ ಸಕಲ ವ್ಯವಸ್ಥೆಗಳೊಂದಿಗೆ ವಸತಿ ಶಾಲೆ ಆರಂಭಿಸಲಾಗುವುದು, ವಸತಿ ಶಾಲೆಯ ಮಕ್ಕಳಿಗೆ ಎಲ್ಲಾ ರೀತಿಯ ಶಿಕ್ಷಣದ ಜೊತೆಗೆ ಕ್ರೀಡಾ ಆಸಕ್ತಿ ಮೂಡಿಸುವ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಯೋಚನೆಯು ಇದೆ ಎಂದು ಅವರು ಹೇಳಿದರು.
ಆರೋಗ್ಯ ಮತ್ತುಶಿಕ್ಷಣಕ್ಕೆಸರಕಾರ ಹೆಚ್ಚಿನ ಕಾಳಜಿ ವಹಿಸಿದೆ. ತುಂಗಪ್ಪ ಬಂಗೇರ ಅವರ ಬಹಳ ವರ್ಷಗಳ ಕನಸು ಇದಾಗಿದ್ದು, ಉತ್ತಮ ರೀತಿಯಲ್ಲಿ ಸುಸಜ್ಜಿತ
ಕಟ್ಟಡ ನಿರ್ಮಾಣಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಎಂ ತುಂಗಪ್ಪ ಬಂಗೇರ, ಪಿಲಾತಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಹರ್ಷಿಣಿ, ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ರಶ್ಮಿ ಎಸ್ ಆರ್, ತಹಶೀಲ್ದಾರ್ ಡಾ. ಸ್ಮಿತಾರಾಮು ಮಂಡ್ಯ, ಇಲಾಖೆಯ ಬಂಟ್ವಾಳ ಅಧಿಕಾರಿ ಬಿಂದಿಯಾ, ಕಟ್ಟಡದ ಮಾಲಕ ಪ್ರಶಾಂತ್ ಪುಂಜಾಲಕಟ್ಟೆ, ಕಾಂತಪ್ಪ ಕರ್ಕೇರ ಚಿದಾನಂದ ರೈ ಕಕ್ಯ, ಹರೀಶ್ ಪ್ರಭು, ಶೇಷಗಿರಿ, ಅಜಿತ್ ಶೆಟ್ಟಿ, ದಯಾನಂದ ನಾಯಕ್, ರಮನಾಥ ರಾಯಿ, ದಿನೇಶ್ ಶೆಟ್ಟಿ ದಂಬೆದಾರ್, ಯಶೋಧರ ಕರ್ಬೆಟ್ಟು, ಹರೀಂದ್ರ ಪೈ, ಶಂಕರ್ ಶೆಟ್ಟಿ ಬೆದ್ರಮಾರ್, ಚಂದ್ರಶೇಖರ್ ಶೆಟ್ಟಿ,ಪ್ರಭಾಕರ ಪಿ.ಎಂ. ಮತ್ತಿತರರು ಉಪಸ್ಥಿತರಿದ್ದರು.














