Coastal Bulletin

ಪಂಜಿಕಲ್ಲು ಸಮೀಪದ ಪುಂಚೋಡಿ ನೇತಾಜಿ ಕಿರಿಯ ಪ್ರಾಥಮಿಕ ಶಾಲೆಗೆ ನೂತನ ಕಟ್ಟಡ ನಿರ್ಮಾಣಕ್ಕೆ ಕಾಟಿಪಳ್ಳ ಜಾನಕಿ ಚಾರಿಟೇಬಲ್ ಟ್ರಸ್ಟ್ ಮುಂದಾಗಿದೆ.

ಇಲ್ಲಿನ ಪಂಜಿಕಲ್ಲು ಗ್ರಾಮದ ಪುಂಚೋಡಿ ಸಮೀಪ ಕಳೆದ 62 ವರ್ಷಗಳಿಂದ ಸಾವಿರಾರು ಮಂದಿಗೆ ಗುಣಮಟ್ಟದ ಶಿಕ್ಷಣ ನೀಡಿ ಇದೀಗ ವಿದ್ಯಾರ್ಥಿಗಳು ಇಲ್ಲದೆ ಮುಚ್ಚುವ ಹಂತದಲ್ಲಿರುವ ಬುಡೋಳಿ ನೇತಾಜಿ ಕಿರಿಯ ಪ್ರಾಥಮಿಕ ಶಾಲೆಗೆ ನೂತನ ಕಟ್ಟಡ ಮತ್ತಿತರ ಮೂಲಭೂತ ಸೌಕರ್ಯ ಒದಗಿಸಿ ವಿದ್ಯಾರ್ಥಿಗಳನ್ನು ಆಕರ್ಷಿಸುವ ಮೂಲಕ ಶಾಲೆ ಉಳಿಸಲು 'ಕಾಟಿಪಳ್ಳ ಜಾನಕಿ ಚಾರಿಟೇಬಲ್ ಸೇವಾ ಟ್ರಸ್ಟ್' ಪಣ ತೊಟ್ಟಿದೆ ಎಂದು ಟ್ರಸ್ಟಿನ ಅಧ್ಯಕ್ಷ ಧರ್ಮೇದ್ರ ಗಣೇಶಪುರ ಹೇಳಿದರು.

ಇಲ್ಲಿನ ಬಿ.ಸಿ.ರೋಡಿನಲ್ಲಿ ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಇದೇ 21ರಂದು ಬೆಳಿಗ್ಗೆ ಗಂಟೆ 9.45ಕ್ಕೆ ನೂತನ ಕಟ್ಟಡ ನಿರ್ಮಿಸಲು ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಶಿಲಾನ್ಯಾಸ ನೆರವೇರಿಸುವರು. ಶಾಸಕ ರಾಜೇಶ ನಾಯ್ಕ ಉಳಿಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ, ಗ್ರಾಮ

ಪಂಚಾಯಿತಿ ಅಧ್ಯಕ್ಷ ಸಂಜೀವ ಪೂಜಾರಿ ಮತ್ತಿತರ ಗಣ್ಯರು ಭಾಗವಹಿಸುವರು ಎಂದರು.

ಸರ್ಕಾರ ಮತ್ತು ಸ್ಥಳೀಯ ದಾನಿಗಳ ನೆರವಿನಲ್ಲಿ ಶಾಲೆಗೆ ವಿವಿಧ ಮೂಲಭೂತ ಸೌಕರ್ಯ ಒದಗಿಸಲಾಗುತ್ತಿದ್ದು, ಎಲ್ ಕೆ ಜಿ ಮತ್ತು ಯುಕೆಜಿ ಸಹಿತ 1ರಿಂದ 5ನೇ ತರಗತಿಗೆ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲಾಗುವುದು ಎಂದರು.

ಶಾಲಾ ಸಂಚಾಲಕ, ನಿವೃತ್ತ ಮುಖ್ಯಶಿಕ್ಷಕ ಶ್ರೀಪತಿ ಭಟ್ ಮಾತನಾಡಿ, ಈ ಶಾಲೆ ಮೈದಾನದಲ್ಲಿ ಕಳೆದ 45 ವರ್ಷಗಳಿಂದ ಕಟೀಲು ಮೇಳದ ಯಕ್ಷಗಾನ ಬಯಲಾಟ ನಡೆಯುತ್ತಿದೆ. ಕಳೆದ ಎರಡು ವರ್ಷಗಳಿಂದ ನನ್ನ ಪೆನ್ಶನ್ ಹಣದಿಂದ ಶಿಕ್ಷಕಿ ನಿಯೋಜಿಸಿ ಶಾಲೆ ಉಳಿಸುವ ಅಂತಿಮ ಪ್ರಯತ್ನ ನಡೆಸಿರುವುದಾಗಿ ತಿಳಿಸಿದರು. 

ಮುಖ್ಯಶಿಕ್ಷಕ ದೊಡ್ಡಪ್ಪ ಎಚ್., ಸಮಿತಿ ಸದಸ್ಯರಾದ ಪ್ರಕಾಶ್ ಕುಮಾರ್ ಜೈನ್, ದೇವಪ್ಪ ಕುಲಾಲ್, ಕೆ.ಎನ್.ಶೇಖರ್, ಜಯ ಮಡಿವಾಳ ಮತ್ತಿತರರು ಉಪಸ್ಥಿತರಿದ್ದರು.

Leave a Comment