Coastal Bulletin

ಬಂಟ್ವಾಳ: ತಾಲೂಕಿನ ಬಾಳ್ತಿಲಗ್ರಾಮದ ಕೋರ್ಯ ಹೊಸಮನೆ ಎಂಬಲ್ಲಿ‌ಅಕ್ರಮವಾಗಿ ನಡೆಯುತ್ತಿದ್ದ ಗಣಿಗಾರಿಕೆ ವಿರುದ್ದ ದೂರು ನೀಡಿದ್ದೆವೆಂಬ ದ್ವೇಷದಲ್ಲಿ ಸ್ಥಳೀಯರಿಬ್ಬರು ನೀರು ಹರಿಯುವ ಕಾಲುವೆ ಅಡ್ಡಲಾಗಿ ಕಟ್ಟಕಟ್ಟೊರುವ ಪರಿಣಾಮ ಕಳೆದ ಮೂರು ವರ್ಷಗಳಿಂದ ಕೃಷಿ ಚಟುವಟಿಕೆಗೆ ತೊಂದರೆ ಯಾಗಿದ್ದಲ್ಲದೆ ಈ ಮೂರುವರ್ಷದಲ್ಲಿ ತನಗೆ ಮೂರು ಲಕ್ಷ ರೂ.ನಷ್ಟವುಂಟಾಗಿದೆ ಎಂದು ಸಂತ್ರಸ್ಥೆ ನೀಲಮ್ಮ ಅವರು ಆರೋಪಿಸಿದ್ದಾರೆ.

ಶುಕ್ರವಾರ ಬಿ.ಸಿ.ರೋಡಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ‌ತನ್ನ ಅಳಲನ್ನು ತೋಡಿಕೊಂಡ ಅವರು ಭತ್ತದ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ನಮಗೆ ಏಳೆಂಟು ದನಕರುಗಳು ಕೂಡ ಇದೆ.ಗದ್ದೆಯಲ್ಲಿ ಎರಡು ಅಡಿಯಷ್ಟು ನೀರು ನಿಂತಿರುವುದರಿಂದ ಭತ್ತದ ಪೈರು ಬೆಳೆಸಲು ಅಸಾಧ್ಯವಾಗಿದ್ದು,ಪರಿಣಾಮ ಜಾನುವಾರುಗಳಿಗೆ ತಿನ್ನಲು ಪೈರು ಇಲ್ಲದಂತಾಗಿದೆ.ಈ ಬಗ್ಗೆ ಸ್ಥಳೀಯ ಪಂಚಾಯತ್ ನಿಂದ ಹಿಡಿದು ಜಿಲ್ಲಾಧಿಕಾರಿವರೆಗೆ ಶಾಸಕರು,ಸಚಿವರು ಮಾತ್ರವಲ್ಲ ಪ್ರಧಾನಿ ಮೋದಿಯವರಿಗೂ ದೂರು ಸಲ್ಲಿಸಿದ್ದರೂ ನಮ್ಮ ಸಮಸ್ಯೆಗೆ ಇನ್ನು ಪರಿಹಾರವೇ ಸಿಕ್ಕಿಲ್ಲ ಎಂದು ಅವರು ಆಳಲನ್ನು ತೋಡಿಕೊಂಡರು.

ಪ್ರಸ್ತುತ ವರ್ಷ ಕೂಡ ಗದ್ದೆಯಲ್ಲಿ ನೀರು ನಿಲುಗಡೆಯಾಗಿರುವುದರಿಂದ ಭತ್ತದ ಕೃಷಿ ಮಾಡುವಂತಿಲ್ಲ ಎಂದು ದೂರಿದ ನೀಲಮ್ಮ ಅವರು ಅಧಿಕಾರಿವರ್ಗದ ನಿರ್ಲಕ್ಷ್ಯತನದಿಂದ

ಮಹಿಳೆಯರೇ ಇರುವ ಬಡಪಾಯಿಗಳಾದ ನಮ್ಮ ಕುಟುಂಬ ಮೂರುವರ್ಷದಲ್ಲಿ ಸುಮಾರು ಮೂರು ಲಕ್ಷ ನಷ್ಟ ಅನುಭವಿಸಿದ್ದವೆ ಎಂದರು. ಒಂದೆಡೆ ಸರಕಾರ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ.ಆದರೆ 1.25 ಎಕ್ರೆ ನಮ್ಮ ಜಮೀನಿನಲ್ಲಿ ನೀರು ನಿಂತು ಭತ್ತದ ಕೃಷಿ ಮಾಡಲಾಗದೆ ಪಾಳುಬಿದ್ದಿದೆ.ನನ್ನ ಅಕ್ಲನ ಗಂಡ ಮುತ್ತಪ್ಪ ಪೂಜಾರಿಯವರು ಕಾಲುವೆಯನ್ನು ತೆರವುಗೊಳಿಸಲು ಮುಂದಾದಾಗ ಮಾಧವ ಎಂಬವರು ಜೀವಬೆದರಿಕೆ ಒಡ್ಡಿದ್ದು,ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದರು.

2019 ರಿಂದ ಈ ಸಮಸ್ಯೆಯನ್ನು ಎದುರಿಸುತ್ತಿದ್ದು, ಜಿಲ್ಲಾಡಳಿತ ಅಥವಾ ತಾಲೂಕಾಡಳಿತ ಈ ಕುರಿತು ಸೂಕ್ತ ಕ್ರಮಕೈಗೊಂಡು ನ್ಯಾಯ ಒದಗಿಸುವಂತೆ ನೀಲಮ್ಮ ಅವರು ಮನವಿ ಮಾಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮುತ್ತಪ್ಪ ಪೂಜಾರಿ ಉಪಸ್ಥಿತರಿದ್ದರು.

Leave a Comment