Coastal Bulletin

ಬಂಟ್ವಾಳ: ತಾಲೂಕು ಕುಲಾಲ ಸುಧಾರಕ ಸಂಘ ಇದರ ವತಿಯಿಂದ ಸ್ವಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಬಿ.ಸಿ.ರೋಡಿನ ಪೊಸಳ್ಳಿಯ ಕುಲಾಲ ಸಮುದಾಯ ಭವನದಲ್ಲಿ ಶುಕ್ರವಾರ ನಡೆಯಿತು.

ದ.ಕ. ಜಿಲ್ಲಾ ಕುಲಾಲ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ ಬಂಟ್ವಾಳ ತಾಲೂಕು ಕುಲಾಲ ಸಂಘವು ನಿರಂತರವಾಗಿ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ವಿದ್ಯಾರ್ಥಿ ವೇತನವನ್ನು ನೀಡುತ್ತಾ ಬರುತ್ತಿದೆ, ವಿದ್ಯಾರ್ಥಿ ವೇತನದ ಮೊತ್ತ ಕಡಿಮೆಯಾಗಿರಬಹುದು ಆದರೆ ವಿದ್ಯಾರ್ಥಿ ವೇತನ ನೀಡುವ ಉದ್ದೇಶ, ನಮ್ಮ ಸಮುದಾಯದವರು ಎನ್ನುವ ಪ್ರೀತಿಯನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕಾಗಿದೆ ಎಂದರು. ಹಿರಿಯರ ತ್ಯಾಗ ಬಲಿದಾನದಿಂದ ಸಮುದಾಯಕ್ಕೆ ಗೌರವ ಬಂದಿದೆ. ಬದ್ದತೆಯಿಂದ ಕೆಲಸ ಮಾಡಿದಾಗ ಇನ್ನಷ್ಟು ಗೌರವ ಸಿಗಲಿದೆ. ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಿದಾಗ ಸಮುದಾಯದ ನಾಯಕತ್ವಕ್ಕೂ ಗೌರವ ಬರುತ್ತದೆ, ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಿ ಸಮಾಜದ ಆಸ್ತಿಯಾಗಬೇಕು ಎಂದು ತಿಳಿಸಿದರು. ಕುಲಾಲರ ಕುಲದೇವರಾದ ವೀರನಾರಾಯಣ ದೇವಸ್ಥಾನದ ಜೀಣೋದ್ಧಾರ ಕಾರ್ಯ ನಡೆಯುತ್ತಿದ್ದು ಎಲ್ಲರೂ ಕರಸೇವೆ ಮಾಡುವ ಪ್ರತಿಜ್ಞೆ

ಮಾಡೋಣ ಎಂದರು. 

ಸಂಘದ ಅಧ್ಯಕ್ಷ ನಾರಾಯಣ ಸಿ. ಪೆರ್ನೆ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾಥಿಗಳು ಉತ್ತಮ ವಿದ್ಯಾಭ್ಯಾಸ ಪಡೆದು ಐಎಎಸ್, ಐಪಿಎಸ್ ಹುದ್ದೆಗಳನ್ನು ಪಡೆಯವ ಗುರಿ ಹೊಂದಬೇಕು, ರಾಜಕೀಯ ನಾಯಕತ್ವ ಪಡೆಯುವತ್ತವೂ ಗಮನ ಹರಿಸಬೇಕು ಎಂದರು. ಕುಲಾಲ ಸಮುದಾಯ ಭವನದ ವಿಸ್ತೃತ ಕಾಮಾಗಾರಿಗೂ ಸಹಕರಿಸುವಂತೆ ಸಮುದಾಯದ ಬಂಧುಗಳಲ್ಲಿ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.  

ಮಳಲಿ ಕುಂಬಾರರ ಗುಡಿಕೈಗಾರಿಕಾ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಬಿ. ಬಂಗೇರ, ಪುತ್ತೂರು ವಿವೇಕಾನಂದ ಕಾಲೇಜಿನ ಉಪನ್ಯಾಸಕಿ ಕವಿತಾ ಯಾದವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಹಿಳಾ ಘಟಕದ ಅಧ್ಯಕ್ಷೆ ಸುಶೀಲ ಲಿಂಗಪ್ಪ ಉಪಸ್ಥಿತರಿದ್ದರು. 

ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಕುಲಾಲ್ ಅಗ್ರಬೈಲು ಸ್ವಾಗತಿಸಿದರು. ಕೋಶಾಧಿಕಾರಿ ಸತೀಶ್ ಕುಲಾಲ್ ಪ್ರಾಸ್ತಾವಿಕ ಮಾತನಾಡಿದರು. ಸದಸ್ಯ ನಾಗೇಶ್ ಬಾಳೆಹಿತ್ಲು ವಂದಿಸಿದರು. ಕಲಾವಿದ ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.

.

Leave a Comment